ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ ಮತ್ತು ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಸಹಯೋಗದೊಂದಿಗೆ 21ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮದೊಂದಿಗೆ ಶುಕ್ರವಾರ ಸಂತಡ್ಕ ಕ್ಷೇತ್ರದಲ್ಲಿ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಅವರು ಆಶೀರ್ವಚನ ನೀಡಿ ಶ್ರಾವಣ ಮಾಸದ 2ನೇ ಶುಕ್ರವಾರ ನಡೆಯುವಂತಹ ಶ್ರೀ ವರಮಾಹಾಲಕ್ಷ್ಮೀ ವ್ರತ ತಿಂಗಳ ಕಾಲ ನಡೆಯುವಂತಹ ಸತ್ಚಿಂತನೆಯನ್ನೊಳಗೊಂಡ ಈ ಸಮಾಜದ ಉನ್ನತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವುದು. ದೈವೀ ಶಕ್ತಿಗಳಾದ ಲಕ್ಷ್ಮೀ, ಕಾಳಿ, ಸರಸ್ವತಿಯರೆಂಬ ಇಚ್ಚಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯನ್ನು ಅವಿರ್ಭವಿಸಿದಂತಹುದಾಗಿದೆ. ಮನುಷ್ಯ ಜೀವನದಲ್ಲಿ ಸುಖ-ದು:ಖಗಳು ನಾಣ್ಯದ ಎರಡು ಮುಖಗಳಂತೆ ಸುಖ ದು:ಖವನ್ನು ಭಗವಂತನಿಗೆ ಸಮರ್ಪಣೆ ಮಾಡಿ ಹುಟ್ಟು ಜೀವನ ಮರಣದ ನಡುವಿನ ಜೀವನವನ್ನು ಇಂತಹ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವುದು ಶ್ಲಾಘನೀಯವಾಗಿದೆ. ಅರಸು ಸಂಕಲ ದೈವಕ್ಷೇತ್ರದ ಜೀರ್ಣೋದ್ದಾರದಲ್ಲೂ ಮಹಿಳೆಯರು ತನ್ನನ್ನು ತೊಡಗಿಸಿಕೊಳ್ಳಬೇಕೆಂದರು. ಕುಟುಂಬದ ಆಧಾರ ಸ್ತಂಭವಾದ ಹೆಂಗಳೆಯರಿಗೆ ಒಗ್ಗಟಿನಲ್ಲಿ ಬಲವಿದೆ ಎಂಬ ಸಂದೇಶವನ್ನು ಸಾರಿದರು. ಇದೇ ಸಂದರ್ಭದಲ್ಲಿ ಅರಸು ಸಂಕಲ ದೈವಕ್ಷೇತ್ರ ಸಂತಡ್ಕದ ಜೀರ್ಣೋದ್ಧಾರದ ವಿಜ್ಞಾಪನ ಪತ್ರವನ್ನು ಸಾಧ್ವಿಗಳು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಯಾಗಿದ್ದ ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯೆ ಜಯಲಕ್ಷ್ಮೀ ಭಟ್ ಉಪಸ್ಥಿತರಿದ್ದರು. ಅರಸು ಸಂಕಲ ದೈವಕ್ಷೇತ್ರದ ಅಧ್ಯಕ್ಷ ಡಾ. ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಳಿ ಅಧ್ಯಕ್ಷೆ ಕಮಲಾಕ್ಷಿ ಶುಭಹಾರೈಸಿದರು. ಸಾಹಿತ್ ಶೆಟ್ಟಿ ಸ್ವಾಗತಿಸಿ, ಆಶಾಲತ ಬಿ.ಎಂ ವಂದಿಸಿದರು. ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೇದಮೂರ್ತಿ ಕುರಿಯ ರಾಮಮೂರ್ತಿಯವರ ದಿವ್ಯ ಹಸ್ತದಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ಜರಗಿತು. ನಂತರ ಅನ್ನಸಂತರ್ಪಣೆ ಜರಗಿತು.