ಬೈರೂತ್: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ (61) ಅವರ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ನೇರ ದಾಳಿ ಮಾಡುವಂತೆ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಆದೇಶಿಸಿದ್ದಾರೆ.
ಇರಾನ್‌ನ ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ ಆಗಿದ್ದ ಹನಿಯೆ ಅವರನ್ನು ರಾಜಧಾನಿ ಟೆಹರಾನ್‌ನಲ್ಲಿರುವ ಅವರ ನಿವಾಸದಲ್ಲಿ ಬುಧವಾರ ಹತ್ಯೆ ಮಾಡಲಾಗಿದೆ. ಇದೇ ವೇಳೆ ಇತರ ಅಧಿಕಾರಿಗಳನ್ನು ಕೊಲ್ಲಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಖಮೇನಿ ಬುಧವಾರ ಬೆಳಿಗ್ಗೆ ನಡೆಸಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಹಾಗೂ ಹಮಾಸ್, ಹನಿಯೆ ಹತ್ಯೆಗೆ ಇಸ್ರೇಲ್ ವಿರುದ್ಧ ಕಿಡಿಕಾರಿವೆ. ಪ್ಯಾಲೆಸ್ಟೀನ್‌ನ ಬಂಡುಕೋರ ಸಂಘಟನೆಯ ರಾಜಕೀಯ ಘಟಕದ ಮುಖ್ಯಸ್ಥ ಹನಿಯೆ ಅವರ ಸಾವಿಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯೇ ಕಾರಣ ಎಂದು ಹಮಾಸ್ ಆರೋಪಿಸಿದೆ. 'ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ' ಎಂದು ಇರಾನ್‌ನ ಪ್ಯಾರಾ ಮಿಲಿಟರಿ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ. ದಾಳಿ ಹೇಗೆ ನಡೆಯಿತು ಎಂಬ ಬಗ್ಗೆ ಅದು ಮಾಹಿತಿ ನೀಡಿಲ್ಲ.
ಆದರೆ, ಹಮಾಸ್ ಮೇಲೆ ಕಳೆದ 10 ತಿಂಗಳಿಂದ ಯುದ್ಧ ನಡೆಸುತ್ತಿರುವ ಇಸ್ರೇಲ್, ಹತ್ಯೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪರಮಾಣು ವಿಜ್ಞಾನಿಗಳು, ಸೇನಾ ಮುಖ್ಯಸ್ಥರು ಸೇರಿದಂತೆ ತನ್ನ ಶತ್ರು ರಾಷ್ಟ್ರಗಳ ನಾಯಕರನ್ನು ವಿದೇಶಗಳಲ್ಲಿ ಹತ್ಯೆ ಮಾಡಿದ ಇತಿಹಾಸವನ್ನು ಇಸ್ರೇಲ್ ಹೊಂದಿದೆ.
ಯಾರೀ ಹನಿಯೆ?
1963ರ ಜನವರಿ 29ರಂದು ಗಾಜಾದಲ್ಲಿ ಜನಿಸಿದ ಹನಿಯೆ ಅವರು 1987ರಲ್ಲಿ ಹಮಾಸ್ ಬಂಡುಕೋರ ಸಂಘಟನೆ ಸೇರಿದ್ದರು. ಸಂಸ್ಥಾಪಕ ಅಹ್ಮದ್ ಯಾಸಿನ್ ಅವರ ಸಹಾಯಕನಾಗಿ ಕೆಲಸ ಮಾಡಿದ್ದರು. ನಂತರ ಸಂಘಟನೆಯಲ್ಲಿ ವಿವಿಧ ಶ್ರೇಣಿಗಳಲ್ಲಿ ಕೆಲಸ ಮಾಡಿ 2017ರಲ್ಲಿ ಹಮಾಸ್‌ನ ಅತ್ಯುನ್ನತ ರಾಜಕೀಯ ನಾಯಕ ಹುದ್ದೆಗೇರಿದ್ದರು. ಆಸ್ತಿಕರಾಗಿದ್ದ ಹನಿಯೆ ಅತ್ಯುತ್ತಮ ವಾಗ್ಮಿಯೂ ಹೌದು. ಗಾಜಾದಲ್ಲಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಸುದೀರ್ಘ ಭಾಷಣ ಮಾಡುತ್ತಿದ್ದರು.
2019ರಲ್ಲಿ ಗಾಜಾ ತೊರೆದು ಸ್ವಯಂಪ್ರೇರಿತರಾಗಿ ಗಡೀಪಾರಾಗಿ ಕತಾರ್‌ನಲ್ಲಿ ನೆಲೆಸಿದ್ದರು. ಜೀವ ಬೆದರಿಕೆಗಳು ಇದ್ದರೂ ಟರ್ಕಿ ಮತ್ತು ಇರಾನ್‌ಗೆ ಆಗಾಗ ಪ್ರಯಾಣಿಸುತ್ತಿದ್ದರು.
'ಹಮಾಸ್ ಗುಂಪಿನ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ನೀತಿ ರೂಪಿಸುವಲ್ಲಿ ಹನಿಯೆ ಮುಖ್ಯ ಪಾತ್ರ ವಹಿಸಿದ್ದರು' ಎಂದು ಹಮಾಸ್ ತಜ್ಞ ಮೈಕೆಲ್ ಮಿಲ್‌ಶ್ತೀನ್ ತಿಳಿಸಿದ್ದಾರೆ.