ಬದಿಯಡ್ಕ: ಬಾಂಜತ್ತಡ್ಕ ತೋಡಿನಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬೀಜಂತಡ್ಕ ನಿವಾಸಿ ಸೀತಾರಾಮ(52)ಅವರ ಮೃತದೇಹ ಕುಂಬಳೆಯ ಶಿರಿಯ ಅಳಿವೆಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯನ್ವಯ ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಕೆ.ಪಿ ವಿನೋದ್ ನೇತೃತ್ವದ ಪೊಲೀಸರು ಹಾಗೂ ಕರಾವಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹ ದಡಸೇರಿಸಿದ್ದಾರೆ. ನಂತರ ಮೃತರ ಸಂಬAಧಿಕರನ್ನು ಕರೆಸಿ, ಗುರುತಿಪತ್ತೆಹಚ್ಚಿದ ನಂತರ ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಸೀತಾರಾಮ ಅವರು ಸಿಪಿಐ ಸ್ಥಳೀಯ ಸಮಿತಿ ಸದಸ್ಯರಾಗಿದ್ದರು.
ಬುಧವಾರ ಸಂಜೆ ಬದಿಯಡ್ಕದಿಂದ ಒಂದು ಕಿ.ಮೀ ದೂರದಲ್ಲಿರುವ ತೋಡಿನಲ್ಲಿ ಸೀತಾರಾಮ ಅವರು ನಾಪತ್ತೆಯಾಗಿದ್ದಾರೆ. ಹುಲ್ಲು ತರಲು ಮನೆಯಿಂದ ಹೊರಟವರು ಬಹಳ ಹೊತ್ತಿನವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ಹುಡುಕಾಡುವ ಮಧ್ಯೆ, ಇವರ ಕೈಯಲ್ಲಿದ್ದ ಕತ್ತಿ, ಚಪ್ಪಲಿ ಹಾಗೂ ಪ್ಲಾಸ್ಟಿಕ್ ತೋಡಿನ ಸನಿಹ ಪತ್ತೆಯಾಗಿದ್ದು, ಮನೆಯವರು ನೀಡಿದ ದಊರಿನನ್ವಯ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.