ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೊಹುವಾ, 'ಒಂದು ಸರಳವಾದ ಅಂಶ: ತನಿಖೆಯ ಅಗತ್ಯವಿರುವ ಅದೇ ನಿಧಿಗಳಲ್ಲಿ ಹೂಡಿಕೆ ಮಾಡಿದ ಅಧ್ಯಕ್ಷರು (ಬುಚ್) ಹಾಗೂ ನಿಧಿಯ ಇತರ ಮಾಲೀಕರನ್ನು ಕಂಡುಹಿಡಿಯುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಪ್ರಮುಖ ಸಂಸ್ಥೆ (ಸೆಬಿ), ಹಿಂಡನ್‌ಬರ್ಗ್ ಆರೋಪದಲ್ಲಿ ನಿಜ ಇಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ಅದರ 6 ಸದಸ್ಯರ ಸಮಿತಿಗೆ ತಿಳಿಸುತ್ತದೆ. 13 ಕಂಪನಿಗಳ ಮಾಲೀಕತ್ವದ ವಿಚಾರದಲ್ಲಿ, ಕೋಳಿ ಮೊದಲೋ ಮೊಟ್ಟೆ ಮೊದಲೋ ಎನ್ನುವ ಪರಿಸ್ಥಿತಿ ಇದೆ. ಇದು ಹಿತಾಸಕ್ತಿ ಸಂಘರ್ಷ ಮತ್ತು ನ್ಯಾಯದ ಅಪಹಾಸ್ಯ ಅಲ್ಲದೇ ಇನ್ನೇನು?' ಎಂದಿದ್ದಾರೆ.
ಮಾಧವಿ ಬುಚ್ ಅಮಾನತಿಗೆ ಟಿಎಂಸಿ ಆಗ್ರಹ
ಹಿಂಡೆನ್‌ಬರ್ಗ್ ಆರೋಪದ ಹಿನ್ನೆಲೆ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಒತ್ತಾಯಿಸಿದೆ.
ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಸುಖೇಂದು ಶೇಖರ್ ರಾಯ್, 'ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಅವರನ್ನು ಈ ಕೂಡಲೇ ಅಮಾನತು ಮಾಡಬೇಕಿದೆ. ಮಾಧವಿ ಬುಚ್ ಮತ್ತು ಅವರ ಪತಿ ದೇಶ ಬಿಟ್ಟು ಹೋಗದಂತೆ ತಡೆಯಲು ಎಲ್ಲ ವಿಮಾನ ನಿಲ್ದಾಣಗಳಿಗೆ ಲುಕ್ ಜೌಟ್ ನೋಟಿಸ್ ಹೊರಡಿಸಬೇಕಿದೆ' ಎಂದರು.
ಪ್ರಕರಣವೇನು?
'ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ, ಅದಾನಿ ಷೇರು ಹಗರಣದಲ್ಲಿ ಭಾಗಿಯಾಗಿದ್ದಾರೆ' ಎಂದು ಅಮೆರಿಕದ ಶಾರ್ಟ್ ಶೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ಮತ್ತೊಂದು ಗಂಭೀರ ಆರೋಪ ಮಾಡಿದೆ.
'ಈ ಹಗರಣದಲ್ಲಿ ಅದಾನಿ ಸಮೂಹವು ಸಂಪಾದಿಸಿದ ಹಣವನ್ನು ವಿದೇಶಗಳಲ್ಲಿ ಹೂಡಿಕೆ ಮಾಡಿದ್ದು, ಅದರಲ್ಲಿ ಸೆಬಿಯ ಈಗಿನ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಪಾಲು ಹೊಂದಿದ್ದಾರೆ. ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿಯವರ ಹಿರಿಯ ಸಹೋದರ ವಿನೋದ್ ಅದಾನಿಯವರ ನಿಯಂತ್ರಣದ, ಬರ್ಮುಡಾ ಮತ್ತು ಮಾರಿಷಸ್‌ನಲ್ಲಿನ ಹೂಡಿಕೆಗಳನ್ನು ರೌಂಡ್-ಟ್ರಿಪ್ ಫಂಡ್‌ಗಳಿಗೆ ಮತ್ತು ಷೇರು ಬೆಲೆಯನ್ನು ಹೆಚ್ಚಿಸಲು ಬಳಸಲಾಗಿದೆ' ಎಂದು ಆರೋಪಿಸಲಾಗಿದೆ.
ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು 2023ರ ಜನವರಿಯಲ್ಲಿ ಹಿಂಡೆನ್‌ಬರ್ಗ್ ವರದಿ ಪ್ರಕಟಿಸಿತ್ತು.