ಢಾಕಾ: ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಶುರುವಾದ ಪ್ರತಿಭಟನೆಯೂ ಹಿಂಸಾರೂಪಕ್ಕೆ ತಿರುಗಿದ್ದು, ಈವರೆಗೆ 300ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶಾದ್ಯಂತ ನಡೆದ ವ್ಯಾಪಕ ಹಿಂಸಾಚಾರದ ಬಳಿಕ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದು, ಮಿಲಿಟರಿ ಆಡಳಿತವನ್ನು ಹೇರಲಾಗಿದೆ.
ಇನ್ನೂ ಈ ಕುರಿತು ಅವರ ಮಗ, ಮಾಜಿ ಸಲಹೆಗಾರ ಸಜೀಬ್ ವಾಜೆದ್ ಜಾಯ್ ಪ್ರತಿಕ್ರಿಯಿಸಿದ್ದಾರೆ.
NDTVಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಜಾಯ್, ಅವರು ದೇಶದಲ್ಲೇ ಉಳಯಲು ಬಯಸಿದ್ದರು. ಆದರೆ, ಇಲ್ಲಿನ ಪರಿಸ್ಥಿತಿಯನ್ನು ನೋಡಿ ಇಲ್ಲಿರುವುದು ಸೂಕ್ತವಲ್ಲ ಎಂದು ಭಾವಿಸಿ ಅವರ ಮನವೊಲಿಸಿ ದೇಶವನ್ನು ತೊರೆಯುವಂತೆ ಮಾಡಿದೆವು. ನಾನು ನಮ್ಮ ತಾಯಿಗೆ ಬಾಂಗ್ಲಾದೇಶದಲ್ಲಿ ಸೃಷ್ಟಿಯಾಗಿರುವ ಅರಾಜಕತೆ ಕುರಿತು ವಿವರಿಸಿದೆ. ಅವರು ಈಗಲೂ ಎಷ್ಟು ಉತ್ಸುಕರಾಗಿದ್ದಾರೋ ಅಷ್ಟೇ ನಿರಾಸೆಗೊಂಡಿದ್ದಾರೆ.
ಬಾಂಗ್ಲಾದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕೆನ್ನುವುದು ಅವರ ಕನಸಾಗಿತ್ತು. ಕಳೆದ 15 ವರ್ಷಗಳಿಂದ ದೇಶಕ್ಕಾಗಿ ಅವರು ದುಡಿದಿದ್ದು, ಭಯೋತ್ಪಾದನೆಯಿಂದ ದೇಶವನ್ನು ಸುರಕ್ಷಿತವಾಗಿರಿಸಿದ್ದಾರೆ. ಇದೆಲ್ಲದರ ನಡುವೆಯೂ ಈ ಅಲ್ಪಸಂಖ್ಯಾತರು, ವಿರೋಧ ಪಕ್ಷಗಳು, ಉಗ್ರಗಾಮಿಗಳು ಆಕೆಯಿಂದ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದ ಎಂದು ಭಾವಿಸಿದ್ದೇವೆ. ಆದರೆ, ನಮ್ಮ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯುವುದಿಲ್ಲ ಎಂಬ ವಿಚಾರ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇದು ಕುಟುಂಬದ ಜವಾಬ್ದಾರಿಯಾಗಿ ಉಳಿದಿಲ್ಲ. ನಾವೇನು ಮಾಡಬಹುದು ಎಂಬುದನ್ನು ತೋರಿಸಿದ್ದೇವೆ. ನಾವು ಬಾಂಗ್ಲಾದೇಶವನ್ನು ಎಷ್ಟು ಅಭಿವೃದ್ಧಿಪಡಿಸಬಹುದು ಎಂಬುದನ್ನು ತೋರಿಸಿದ್ದೇವೆ. ನನ್ನ ಪ್ರಕಾರ ಸದ್ಯಕ್ಕೆ ಹಿಂಸಾವಾರ ನಿಲ್ಲುವುದು ಅನುಮಾನವಾಗಿದ್ದು, ನನ್ನ ಅಜ್ಜ ದೇಶವನ್ನು ಸ್ವತಂತ್ರಗೊಳಿಸಿದರು ಮತ್ತು ಉದ್ರಿಕ್ತರು ಇಡೀ ಕುಟುಂಬವನ್ನು ಕೊಂದರು. ಇದೀಗ ಮತ್ತೊಮ್ಮೆ ದುಷ್ಟ ಶಕ್ತಿಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಬಾಂಗ್ಲಾದೇಶದ ಬಹುಪಾಲು ಜನರು ಮೌನವಾಗಿರುವುದನ್ನು ನೋಡುವುದು ತುಂಬಾ ನಿರಾಶಾದಾಯಕವಾಗಿದೆ. ನನ್ನ ತಾಯಿ ಇನ್ನೆಂದು ರಾಜಕೀಯಕ್ಕೆ ಮರಳುವುದಿಲ್ಲ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಮಗ, ಮಾಜಿ ಸಲಹೆಗಾರ ಸಜೀಬ್ ವಾಜೆದ್ ಜಾಯ್ ಹೇಳಿದ್ದಾರೆ.