ಪ್ರಯಾಗರಾಜ್: ಮಥುರಾದಲ್ಲಿನ ಕೃಷ್ಣ ಜನ್ಮಭೂಮಿ - ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ 18 ಪ್ರಕರಣಗಳ ವಿಚಾರಣೆಯು ಮುಂದುವರಿಯಲು ಯಾವ ಅಡ್ಡಿಯೂ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
18 ಪ್ರಕರಣಗಳ ಅರ್ಜಿಗಳು ಪುರಸ್ಕಾರಯೋಗ್ಯವೇ ಎಂಬ ಪ್ರಶ್ನೆಯೊಂದಿಗೆ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅರ್ಜಿಗಳು ಪುರಸ್ಕಾರಯೋಗ್ಯವೇ ಎಂಬ ಪ್ರಶ್ನೆಯೊಂದಿಗೆ ಸಮಿತಿ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರು ಜೂನ್ 6ರಂದು ಕಾಯ್ದಿರಿಸಿದ್ದರು.
ಹಿಂದೂ ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳು, ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿ ಇರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂಬ ಕೋರಿಕೆಯನ್ನು ಹೊಂದಿವೆ. ಆದರೆ, ಈ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ - 1991ರ ಅಡಿಯಲ್ಲಿ ನಿರ್ಬಂಧ ಇದೆ ಎಂದು ಮಸೀದಿ ಸಮಿತಿ ವಾದಿಸಿದೆ.
ಶ್ರೀಕೃಷ್ಣ ಜನಿಸಿದ ಸ್ಥಳದಲ್ಲಿ ಇದ್ದ ದೇವಸ್ಥಾನವನ್ನು ಧ್ವಂಸಗೊಳಿಸಿದ ನಂತರದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಹಿಂದೂ ಅರ್ಜಿದಾರರ ವಾದ.