ಪೆರ್ಲ: ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ರಂಗ ಶಿಬಿರಗಳ ಪಾತ್ರ ಮಹತ್ತರವಾದುದು ಎಂದು ರಂಗನಟ, ರಂಗಚಿನ್ನಾರಿ ನಿರ್ದೇಶಕರಲ್ಲೊಬ್ಬರಾದ ಸತೀಶ್ಚಂದ್ರ ಭಂಡಾರಿ ಕೋಳಾರು ತಿಳಿಸಿದ್ದಾರೆ.
ಅವರು ರಂಗಚಿನ್ನಾರಿ ಕಾಸರಗೋಡು ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಶೇಣಿ ಶ್ರೀ ಶಾರದಂಬಾ ಹೈಯರ್ ಸೆಕೆಂಡರಿ ಶಾಲಾ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಂಗ ಕಾರ್ಯಾಗಾರ'ರಂಗ ಸಂಸ್ಕøತಿ'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿಯಲ್ಲಿ ಪರಿಪೂರ್ಣತೆ ಸಾಧಿಸಬೇಕಾದರೆ ಅವಿರತ ಪ್ರಯತ್ನ ಅಗತ್ಯ. ವಿದ್ಯಾರ್ಥಿಗಳು ರಂಗಕಲೆಯನ್ನು ಕರಗತಮಾಡಿಕೊಳ್ಳುವ ಮೂಲಕ ಉತ್ತಮ ಕಲಾವಿದರಾಗಿ ಬೆಳೆಯಲು ಶ್ರಮಿಸಬೇಕು ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲ ಶಾಸ್ತಾಕುಮಾರ್ ಎ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ, ಶಿಕ್ಷಕ ಉದಯ ಸಾರಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ರಾಧಾಕೃಷ್ಣ ನಾಯಕ್, ಶಾಲಾ ಪ್ರಬಂಧಕಿ ಶಾರದಾ ವೈ ಗೌರವ ಉಪಸ್ಥಿತರಿದ್ದರು. ಪ್ರಶಸ್ತಿ ವಿಜೇತ ರಂಗ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ಉಪಸ್ಥಿತರಿದ್ದರು.
ಶಾಲಾ ಉಪನ್ಯಾಸಕ ಡಾ. ಸುಭಾಷ್ ಪಟ್ಟಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸುವುದರೊಂದಿಗೆ ವಂದಿಸಿದರು. ನಂತರ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಾಸರಗೋಡು ಚಿನ್ನಾ ಅವರ ನಿರ್ದೇಶನದಲ್ಲಿ ಕಾರ್ಯಾಗಾರ ನಡೆಸಲಾಯಿತು.