ಬದಿಯಡ್ಕ: ತುಳುನಾಡಿನಲ್ಲಿ ಮಾರಿ ಕಳೆಯಲು ಆಟಿತಿಂಗಳಲ್ಲಿ ಊರು ಸಂಚಾರ ಮಾಡಿ ಸಂಗ್ರಹವಾದ ಹಣವನ್ನು ದೈವ ಕಲಾವಿದರೊಬ್ಬರು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಬದಿಯಡ್ಕ ಸಮೀಪದ ಗೋಳಿಯಡ್ಕ ನಿವಾಸಿ ರಾಮ ಗೋಳಿಯಡ್ಕ ಎಂಬವರ ಈ ಪ್ರಾಮಾಣಿಕ ಕಾಳಜಿ ನಾಡಿನೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ರಾಮ ಗೋಳಿಯಡ್ಕ ಅವರು ಬದಿಯಡ್ಕ ಮಂಡಲ ಕಾಂಗ್ರೆಸಿನ ಕಾರ್ಯಕಾರೀ ಸಮಿತಿ ಸದಸ್ಯರಾಗಿದ್ದು, ಸಂಗ್ರಹವಾದ ಹಣವನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಮತ್ತು ಕಾರಡ್ಕ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಗಂಗಾಧರ ಗೋಳಿಯಡ್ಕ ಅವರ ಮೂಲಕ ಪರಿಹಾರ ನಿಧಿಗೆ ಹಸ್ತಾಂತರಿಸಿದರು. ಕಾರಡ್ಕ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಮ ಪಟ್ಟಾಜೆ, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್, ಯೂತ್ ಕಾಂಗ್ರೆಸ್ ಮಂಡಲಾಧ್ಯಕ್ಷ ಕೃಷ್ಣ ಕುಮಾರ್, ಮಂಡಲ ಕಾಂಗ್ರೆಸ್ ಕಾರ್ಯದರ್ಶಿ ವಾಮನ ನಾಯ್ಕ್ ಜೊತೆಗಿದ್ದರು.