ಅಹಮದಾಬಾದ್: ಕೋಲ್ಕತ್ತಾದಲ್ಲಿ ವೈದ್ಯೆ ಅತ್ಯಾಚಾರ-ಹತ್ಯೆಯನ್ನು ಖಂಡಿಸಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಪಿಸ್ತೂಲ್ ಪ್ರದರ್ಶಿಸಿದ ಗೋವಿಂದ್ ಗಜೇರಾ ಎಂಬ ವೈದ್ಯನು ವಿರುದ್ಧ ಪೊಲೀಸರು ಶನಿವಾರ ಕೇಸ್ ದಾಖಲಿಸಿದ್ದಾರೆ.
ಪ್ರತಿಭಟನೆ ವೇಳೆ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವಾಗ ಗೋವಿಂದ್ ಗಜೇರಾ ಅವರು ತಮ್ಮ ಪರವಾನಗಿ ಪಡೆದ ಪಿಸ್ತೂಲ್ ಅನ್ನು ಪ್ರದರ್ಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶುಕ್ರವಾರ ಅಮ್ರೇಲಿಯ ಶಾಂತಾಬಾ ವೈದ್ಯಕೀಯ ಕಾಲೇಜಿನ ಇಂಟರ್ನ್ ವೈದ್ಯರು ಅಹಮದಾಬಾದ್‌ನ ರಾಜಕಮಲ್ ಚೌಕ್‌ನಲ್ಲಿ ಕ್ಯಾಂಡಲ್‌ಲೈಟ್ ಮೆರವಣಿಗೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಡಾ. ಗಜೇರಾ ಅವರು ತಮ್ಮ ಪರವಾನಿಗೆ ಪಡೆದಿರುವ ರಿವಾಲ್ವರ್ ಅನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ ಮತ್ತು ನಮ್ಮ ರಕ್ಷಣೆಗಾಗಿ ಶಸ್ತ್ರಸಜ್ಜಿತರಾಗುವಂತೆ ವೈದ್ಯರಿಗೆ ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಅವರು ಪಿಸ್ತೂಲ್ ಹಿಡಿದಿರುವುದು ಕಂಡುಬಂದಿದ್ದು, ಡಾ.ಗಜೇರಾ ಅವರು ತಮ್ಮ ಭಾಷಣದಲ್ಲಿ, “ಪ್ರತಿಯೊಬ್ಬರೂ ತಮ್ಮ ಸುರಕ್ಷತೆಗಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರಬೇಕು. ಮುಂದಿನ ಐದು ವರ್ಷಗಳಲ್ಲಿ, ಇಂತಹ ಘಟನೆಗಳು ಗಣನೀಯವಾಗಿ ಹೆಚ್ಚಾಗುತ್ತವೆ ಎಂದು ಹೇಳಿದ್ದಾರೆ.
ಪರವಾನಗಿ ಪಡೆದ ಪಿಸ್ತೂಲ್ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಡಾ. ಗಜೇರಾ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ(BNS)ಯ ಸೆಕ್ಷನ್ 353(1)(b) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಅಮ್ರೇಲಿ ಪೊಲೀಸ್ ಉಪಾಧೀಕ್ಷಕ(ಡಿವೈಎಸ್ಪಿ) ಚಿರಾಗ್ ದೇಸಾಯಿ ಅವರು ತಿಳಿಸಿದ್ದಾರೆ.