ಢಾಕಾ: ಕಿರಾಣಿ ಅಂಗಡಿ ಮಾಲೀಕನ ಸಾವು ಪ್ರಕರಣದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪಾತ್ರದ ಕುರಿತು ತನಿಖೆ ನಡೆಸುವಂತೆ ಬಾಂಗ್ಲಾದೇಶದ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ.
ಹಸೀನಾ ಮತ್ತು ಇತರ ಆರು ಮಂದಿ ವಿರುದ್ಧ ಮೃತ ಕಿರಾಣಿ ಅಂಗಡಿ ಮಾಲೀಕ ಅಬು ಸೈಯದ್ ಅವರ ಹಿತೈಷಿ ಅಮೀರ್ ಹಮ್ಜಾ ಎಂಬುವವರು ಕೊಲೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆಗೆ ಢಾಕಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅನುಮತಿಸಿದೆ ಎಂದು ದೂರುದಾರ ಹಮ್ಜಾ ಪರ ವಕೀಲ ಅನ್ವರುಲ್ ಇಸ್ಲಾಂ ತಿಳಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ರಾಜೇಶ್ ಚೌಧರಿ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಹಸೀನಾ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾಡರ್, ಮಾಜಿ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಜುಲೈ 19 ರಂದು ಸಂಜೆ 4 ಗಂಟೆಗೆ ಢಾಕಾದ ಮೊಹಮ್ಮದ್‌ಪುರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಇತರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಇದೇ ವೇಳೆ ರಸ್ತೆ ದಾಟುತ್ತಿದ್ದ ಅಬು ಸೈಯದ್ ಅವರಿಗೆ ಗುಂಡು ತಗುಲಿ ಅವರು ಮೃಪಟ್ಟಿದ್ದರು. ಹಿಂಸಾಚಾರವನ್ನು ಹತ್ತಿಕ್ಕಲು ಹಸೀನಾ ಅವರು ಕಠಿಣ ಕ್ರಮಕ್ಕೆ ಕರೆ ನೀಡಿದ್ದು, ಘಟನೆಗೆ ಕಾರಣ ಎಂದು ಹಮ್ಜಾ ಆರೋಪಿಸಿದ್ದಾರೆ.
'ನನಗೆ ಹಾಗೂ ಸೈಯದ್‌ಗೆ ಸಂಬಂಧವಿಲ್ಲ. ಪ್ರಕರಣ ದಾಖಲಿಸಲು ಆತನ ಕುಟುಂಬಕ್ಕೆ ಹಣಕಾಸಿನ ವ್ಯವಸ್ಥೆ ಇಲ್ಲ. ಹಾಗಾಗಿ ಸ್ವಯಂಪ್ರೇರಣೆಯಿಂದ ನಾನು ನ್ಯಾಯಾಲಯದ ಮೊರೆ ಹೋಗಿದ್ದೇನೆ. ಶೇಖ್ ಹಸೀನಾ ವಿರುದ್ಧ ಕಾನೂನು ಹೋರಾಟ ಮಾಡಲು ಧೈರ್ಯ ತೋರಿದ ಮೊದಲ ಸಾಮಾನ್ಯ ಪ್ರಜೆ ನಾನು' ಎಂದು ಹಮ್ಜಾ ರಾಯಿಟರ್ಸ್‌ಗೆ ತಿಳಿಸಿದ್ದಾರೆ.