ನವದೆಹಲಿ: 'ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರ ಪತಿ ಧವಳ್ ಬುಚ್ ಅವರು ಹಿರಿಯ ಸಲಹೆಗಾರರಾಗಿ ಕೆಲಸ ಮಾಡುವ ಹೂಡಿಕೆ ಕಂಪನಿ ಬ್ಲಾಕ್‌ಸ್ಟೋನ್‌ಗೆ ಭಾರತದಲ್ಲಿ ಹಲವು ಗ್ರಾಹಕರಿದ್ದಾರೆ. ಈ ಗ್ರಾಹಕ ಕಂಪನಿಗಳಿಗೆ ಮಾಧವಿ ಅವರು ಹಲವು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ' ಎಂದು ಆರೋಪಿಸಿ 'ದಿ ಮಾರ್ನಿಂಗ್ ಕಾಂಟೆಕ್ಸ್ಟ್' ಎನ್ನುವ ಮಾಧ್ಯಮ ಸಂಸ್ಥೆಯು ವರದಿ ಪ್ರಕಟಿಸಿದೆ.
ಈ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್, ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಅವರ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದೆ. 'ಮಾಧವಿ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದನ್ನು ಒಪ್ಪಲು ಸಾಧ್ಯವೇ ಇಲ್ಲ' ಎಂದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಅದಾನಿ ಸಮೂಹದ ಜೊತೆ ನಂಟು ಹೊಂದಿರುವ ವಿದೇಶಿ ಹೂಡಿಕೆ ನಿಧಿಗಳಲ್ಲಿ ಮಾಧವಿ ಮತ್ತು ಅವರ ಪತಿ ಧವಳ್ ಬುಚ್ ಅವರು ಪಾಲು ಹೊಂದಿರುವ ಕಾರಣದಿಂದಾಗಿ, ಅದಾನಿ ಸಮೂಹದ ವಿರುದ್ಧ ಕ್ರಮ ಕೈಗೊಳ್ಳಲು ಸೆಬಿ ಹಿಂದೇಟು ಹಾಕುತ್ತಿರಬಹುದು ಎಂದು ಹಿಂಡೆನ್‌ಬರ್ಗ್ ಆರೋಪಿಸಿತ್ತು. ಈ ಆರೋಪಗಳನ್ನು ಮಾಧವಿ ಅವರು ಈ ಹಿಂದೆ ತಳ್ಳಿ ಹಾಕಿದ್ದರು.
'ಅದಾನಿ ಸಮೂಹದ ಕುರಿತು ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ತನಿಖೆಯಲ್ಲಿ ಅದಾನಿ ಸಮೂಹಕ್ಕೆ ಸೆಬಿ ಕ್ಲೀನ್ ಚಿಟ್ ನೀಡಿತ್ತು. ಇದು ಸುಪ್ರೀಂ ಕೋರ್ಟ್ ಕುರಿತು ಮಾಧವಿ ಅವರು ಮಾಡಿದ್ದ ಅಪಹಾಸ್ಯವಾಗಿತ್ತು. ಈಗ ಸೆಬಿ ಅಧ್ಯಕ್ಷೆ ಅವರ ಹಿತಾಸಕ್ತಿ ಸಂಘರ್ಷದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ' ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.