ಬದಿಯಡ್ಕ: ಭಾಷಾ ವೈವಿಧ್ಯತೆಯಿಂದ ಕೂಡಿದ ಕಾಸರಗೋಡಿನಲ್ಲಿ ಶ್ರೀ ಎಡನಿರು ಮಠದ ಸಮಾಜ ಸೇವಾ ಕಾರ್ಯಗಳು ಶ್ಲಾಘನೆಗೆ ಕಾರಣವಾಗಿರುವುದಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ.
ಅವರು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ವತಿಯಿಂದ ಸೇವಾರೂಪದಲ್ಲಿ ನಡೆದುಬರುತ್ತಿರುವ ಶ್ರೀಮದ್ ದೇವೀ ಭಾಗವತ ಸಪ್ತಾಹ ಮತ್ತು ಯಕ್ಷಗಾನ ತಾಳಮದ್ದಳೆ ನವಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಎಡನೀರು ಮಠ ಜಾತಿ, ಧರ್ಮ, ಭಾಷೆಗೆ ಅತೀತವಾಗಿ ಕಾರ್ಯನಿರ್ವಹಿಸುತ್ತಿರುವುದರ ಜತೆಗೆ ಕಲೆ ಹಾಗೂ ಕಲಾವಿದರಿಗೆ ಆಶ್ರಯದಾತರಾಗಿರುವುದು ಹೆಮ್ಮೆಯ ವಿಚಾರ. ಹಿರಿಯ ಸ್ವಾಮೀಜಿ ಅವರ ವಿಚಾರಧಾರೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಮಠದ ಚಟುವಟಿಕೆ ಮುನ್ನಡೆಸಿಕೊಂಡು ಹೋಗುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಸೇವಾ ಕೈಂಕರ್ಯ ಉದಾತ್ತವಾದುದು ಎಂದು ತಿಳಿಸಿದರು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ. ಟಿ. ಶ್ಯಾಮ ಭಟ್ ಐಎಎಸ್ ಸಮಾರೋಪ ಭಾಷಣ ಮಾಡಿದರು. ಚಾತುರ್ಮಾಸ್ಯ ಸಮಿತಿ ಅದ್ಯಕ್ಷ ಬಲರಾಮ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭ ಯಕ್ಷಗಾನದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್, ಹಿರಿಯ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಕಲಾವಿದ ಗಂಗಾಧರ ಪುತ್ತೂರು ಅವರ ಸಂಸ್ಮರಣೆ ನಡೆಯಿತು. ಖ್ಯಾತ ಯಕ್ಷಗಾನ ಕಲಾವಿದ ವಾಸುದೇವ ರಂಗಭಟ್ಟ ಸಂಸ್ಮರಣಾ ಭಾಷಣ ಮಾಡಿದರು.
ಕಾಸರಗೋಡು ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ವತಿಯಿಂದ ಮಹಿಷಾಸುರ ವಧೆ ಯಕ್ಷಗಾನ ಬೊಂಬೆಯಾಟ, ಸಂಜೆ 'ಶಾಂಭವೀ ವಿಲಾಸ'ಯಕ್ಷಗಾನ ತಾಳಮದ್ದಳೆ ನಡೆಯಿತು.