ಮುಂಬೈ: 'ಕುಸಿದು ಬಿದ್ದಿರುವ ಛತ್ರಪತಿ ಶಿವಾಜಿ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು ನೌಕಾಪಡೆ' ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು.
ಕಳದೆ ವರ್ಷ ನೌಕಾಪಡೆಯ ದಿನದಂದು(ಡಿಸೆಂಬರ್ 4) ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್ ಕೋಟೆಯ ಬಳಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಸೋಮವಾರ(ಆಗಸ್ಟ್ 26) ಮಧ್ಯಾಹ್ನ ನೆರಕ್ಕುರುಳಿತ್ತು.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡಣವೀಸ್, 'ಸಿಂಧುದುರ್ಗ ಜಿಲ್ಲೆಯಲ್ಲಿ ಕುಸಿದು ಬಿದ್ದಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆದಿಲ್ಲ. ನೌಕಾಪಡೆಯೇ ಇದರ ನಿರ್ವಹಣೆ ಮಾಡಿತ್ತು. ಪ್ರತಿಮೆಯ ನಿರ್ಮಾಣದ ಹೊಣೆ ಹೊತ್ತವರು ಸಮುದ್ರದ ಗಾಳಿಯ ವೇಗ ಮತ್ತು ಕಬ್ಬಿಣದ ಗುಣಮಟ್ಟದಂತಹ ಪ್ರಮುಖ ಅಂಶಗಳನ್ನು ಕಡೆಗಣಿಸಿರಬಹುದು. ಸಮುದ್ರದ ಗಾಳಿಗೆ ಒಡ್ಡಿಕೊಂಡಿದ್ದರಿಂದ ಕಬ್ಬಿಣಕ್ಕೆ ಬಹುಬೇಗ ತುಕ್ಕು ಹಿಡಿದಿರಬಹುದು' ಎಂದು ಹೇಳಿದರು.
'ಪ್ರತಿಮೆ ಉರುಳಿದ ಜಾಗದಲ್ಲಿಯೇ ಶಿವಾಜಿಯ ದೊಡ್ಡ ಪ್ರತಿಮೆ ನಿರ್ಮಾಣ ಮಾಡುವ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ' ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ವಿಪಕ್ಷಗಳು ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಪ್ರತಿಮೆ ಉರುಳಿ ಬಿದ್ದಿರುವುದು ನೋವಿನ ಸಂಗತಿ. ಆದರೆ ಅದರ ಬಗ್ಗೆ ವಿಪಕ್ಷಗಳ ನಿಲುವು ಅಸಹ್ಯ ಹುಟ್ಟಿಸುವಂತಿದೆ. ಇಂತಹ ವಿಷಯಗಳನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ' ಎಂದರು.