HEALTH TIPS

ವೈದ್ಯ ವಿದ್ಯಾರ್ಥಿನಿಯ ಹತ್ಯೆ | ತ್ವರಿತ ತನಿಖೆಗೆ ಆಗ್ರಹ: ವೈದ್ಯರ ಪ್ರತಿಭಟನೆ

             ಕೋಲ್ಕತ್ತ/ನವದೆಹಲಿ: ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಬುಧವಾರ ಕೂಡ ಮುಂದುವರಿದಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ತ್ವರಿತಗೊಳಿಸಬೇಕು ಎಂದು ಪ್ರತಿಭಟನನಿರತ ವೈದ್ಯರು ಆಗ್ರಹಿಸಿದ್ದಾರೆ.

           ಪಶ್ಚಿಮ ಬಂಗಾಳದ ವಿವಿಧ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಕಿರಿಯ ವೈದ್ಯರು ಪ್ರತಿಭಟನರ‍್ಯಾಲಿ ನಡೆಸಿ, ಕೆಲಸದ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದರು.

ಆರ್‌.ಜಿ.ಕರ್‌ ಆಸ್ಪತ್ರೆಗೆ ಹೊಸದಾಗಿ ನೇಮಕಗೊಂಡ ಪ್ರಾಂಶುಪಾಲರು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದೂ ಆರೋಪಿಸಿದ ಪ್ರತಿಭಟನಕಾರರು, ಅವರು ತಕ್ಷಣವೇ ಕಚೇರಿಗೆ ಹಾಜರಾಗಬೇಕು ಎಂದು ಆಗ್ರಹಿಸಿದರು.

            ಪಶ್ಚಿಮ ಬಂಗಾಳದ ಕಿರಿಯ ವೈದ್ಯರ ವೇದಿಕೆಯು 'ನಮಗೆ ನ್ಯಾಯ ಬೇಕು' ಬ್ಯಾನರ್ ಅಡಿಯಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಹಲವಾರು ಹಿರಿಯ ವೈದ್ಯರೂ ಪಾಲ್ಗೊಂಡಿದ್ದರು. ರ‍್ಯಾಲಿಯುಸಿಬಿಐ ಕಚೇರಿ ಇರುವ ಸಿಜಿಒ ಕಾಂಪ್ಲೆಕ್ಸ್‌ನಿಂದ ಪ್ರಾರಂಭವಾಗಿ ಸಾಲ್ಟ್ ಲೇಕ್‌ನಲ್ಲಿರುವ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿ ಇರುವ ಸ್ವಾಸ್ಥ್ಯ ಭವನದವರೆಗೂ ನಡೆಯಿತು.

                 ಈ ಘಟನೆ ಖಂಡಿಸಿ ಮತ್ತು ಕೆಲಸದ ಸ್ಥಳದಲ್ಲಿ ಸುರಕ್ಷತೆಗೆ ಒತ್ತಾಯಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಸ್ಥಾನಿಕ ವೈದ್ಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯು ಬುಧವಾರ 10ನೇ ದಿನಕ್ಕೆ ಕಾಲಿಟ್ಟಿತು.


         'ಸುರಕ್ಷತೆ ಕೇವಲ ಭರವಸೆಯಾಗಬಾರದು. ನಮಗೆ ನಮ್ಮನ್ನು ರಕ್ಷಿಸಿಕೊಳ್ಳುವ ಕಾಯ್ದೆ ಬೇಕು. ನಾವು ಅದನ್ನು ಕೇಂದ್ರ ಸರ್ಕಾರದಿಂದ ಬಯಸುತ್ತಿದ್ದೇವೆ' ಎಂದು ಪ್ರತಿಭಟನನಿರತರು ಹೇಳಿದರು.

ಭದ್ರತೆ ಪರಿಶೀಲಿಸಿದ ಸಿಐಎಸ್‌ಎಫ್‌:

            ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್‌ಎಫ್) ನಿಯೋಜಿಸಿ, ವೈದ್ಯರು ಕರ್ತವ್ಯ ಪುನರಾರಂಭಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಒಂದು ದಿನದ ನಂತರ, ಕೇಂದ್ರ ಅರೆಸೇನಾ ಪಡೆಯ ತಂಡವು ಬುಧವಾರ ಸರ್ಕಾರಿ ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿತು.

            ಸಿಐಎಸ್‌ಎಫ್ ತಂಡ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಬೆಳಿಗ್ಗೆ ಆಸ್ಪತ್ರೆಯನ್ನು ತಲುಪಿದೆ. ಭದ್ರತಾ ವ್ಯವಸ್ಥೆಗಳ ಕುರಿತು ಅವರು ಸ್ಥಳೀಯ ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳ ಜತೆ ಚರ್ಚಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

             ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಘಟನೆಯ ನಂತರ ಆಗಸ್ಟ್ 15 ರಂದು ನಸುಕಿನಲ್ಲಿ ವೈದ್ಯಕೀಯ ಸಂಸ್ಥೆಗೆ ನುಗ್ಗಿದ ಗುಂಪೊಂದು ತುರ್ತು ವಿಭಾಗ, ನರ್ಸಿಂಗ್ ಸ್ಟೇಷನ್ ಮತ್ತು ಔಷಧಾಲಯವನ್ನು ಧ್ವಂಸಗೊಳಿಸಿತ್ತು. ಅಲ್ಲದೆ, ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಹಾನಿಗೊಳಿಸಿತ್ತು.

        ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳು ಬುಧವಾರ ಕೋಲ್ಕತ್ತದಲ್ಲಿ ಪ್ರತಿಭಟನ ರ‍್ಯಾಲಿ ನಡೆಸಿದರು-( ಎಎಫ್‌ಪಿ ಚಿತ್ರ)

ದಿನದ ಬೆಳವಣಿಗೆಗಳು

* ಆರ್‌.ಜಿ. ಕರ್ ವೈದ್ಯಕೀಯ ಸಂಸ್ಥೆಯಲ್ಲಿ ಗುಂಪೊಂದು ನಡೆಸಿದ ವಿಧ್ವಂಸಕ ಕೃತ್ಯ ಸಂಬಂಧ ಇಬ್ಬರು ಎಸಿಪಿಗಳು ಮತ್ತು ಒಬ್ಬ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸ್‌ ಅಧಿಕಾರಿಗಳ ಅಮಾನತು.

* ಇಡೀ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿರುವುದರಿಂದ ಈ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಜಂಟಿ ವಿಚಾರಣೆಯನ್ನು ಕಲ್ಕತ್ತ ಹೈಕೋರ್ಟ್‌ ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ.

* ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿರುವ ಬಿಜೆಪಿ ಪಶ್ಚಿಮ ಬಂಗಾಳ ಘಟಕವು ಮಮತಾ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಪ್ರಕರಣವನ್ನು ಖಂಡಿಸಿ ರಾಜ್ಯ ಬಿಜೆಪಿ ಘಟಕವು ಐದು ದಿನಗಳ ಕಾಲ ಪ್ರತಿಭಟನೆ ನಡೆಸುತ್ತಿದೆ.

* ದೆಹಲಿಯ ಪ್ರಮುಖ ಆಸ್ಪತ್ರೆಗಳ ಸ್ಥಾನಿಕ ವೈದ್ಯರ ಸಂಘದ ಸದಸ್ಯರು, ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ಸ್ (ಫೋರ್ಡಾ) ಮತ್ತು ಫೆಡರೇಷನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ಸ್ (ಎಫ್‌ಎಐಎಂಎ) ಸದಸ್ಯರು ರಾಷ್ಟ್ರದ ರಾಜಧಾನಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.

* ದೆಹಲಿಯ ಏಮ್ಸ್‌, ಜಿಟಿಬಿ, ಲೇಡಿ ಹಾರ್ಡಿಂಜ್‌ ಮೆಡಿಕಲ್‌ ಕಾಲೇಜು ಮತ್ತು ಅದರ ಸಹಯೋಗದ ಆಸ್ಪತ್ರೆಗಳು, ಮೌಲಾನಾ ಆಜಾದ್‌ ಮೆಡಿಕಲ್‌ ಕಾಲೇಜು ಮತ್ತು ಅದರ ಸಹಯೋಗದ ಆಸ್ಪತ್ರೆಗಳು ಮೌನ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿವೆ.

ರಾಧಿಕಾ ಶರ್ಮಾ ವೈದ್ಯೆ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು ನವದೆಹಲಿವೈದ್ಯೆಯಾಗಿ ಮಾತ್ರವಲ್ಲ ಮಹಿಳೆಯಾಗಿ ನಾನು ಕೆಲಸ ಮಾಡುವ ಸ್ಥಳದಲ್ಲಿ ಅಸುರಕ್ಷಿತ ಭಾವನೆ ಅನುಭವಿಸುತ್ತೇನೆ. ಕೆಲಸದ ವೇಳೆ ನಾನು ಹೆಚ್ಚು ಜಾಗರೂಕಳಾ‌ಗಿರಬೇಕು ಮತ್ತು ನನ್ನ ಸುರಕ್ಷತೆಯ ಬಗ್ಗೆ ನಿರಂತರವಾಗಿ ಯೋಚಿಸಬೇಕಿದೆ

                  ಹಿಂದಿನ ಪ್ರಾಂಶುಪಾಲಗೆ ಸುಳ್ಳುಪತ್ತೆ ಪರೀಕ್ಷೆ?

             ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಪ್ರಕರಣ ಸಂಬಂಧ ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಈ ಹಿಂದಿನ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸಿಬಿಐ ಅಧಿಕಾರಿಗಳು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. 'ನಾವು ಘೋಷ್ ಅವರ ಉತ್ತರಗಳನ್ನು ಮತ್ತಷ್ಟು ಪರಿಶೀಲನೆಗೆ ಒಳಪಡಿಸಲು ಬಯಸಿದ್ದೇವೆ. ಏಕೆಂದರೆ ನಮ್ಮ ಕೆಲವು ಪ್ರಶ್ನೆಗಳಿಗೆ ಅವರು ನೀಡಿರುವ ಉತ್ತರಗಳಲ್ಲಿ ವ್ಯತ್ಯಾಸಗಳಿವೆ. ಆದ್ದರಿಂದ ನಾವು ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಆಯ್ಕೆಯ ಬಗ್ಗೆ ಯೋಚಿಸುತ್ತಿದ್ದೇವೆ' ಎಂದು ಅಧಿಕಾರಿಯೊಬ್ಬರು 'ಪಿಟಿಐ'ಗೆ ತಿಳಿಸಿದ್ದಾರೆ. ಆಗಸ್ಟ್ 9 ರಂದು ವೈದ್ಯಕೀಯ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾದ ಎರಡು ದಿನಗಳ ನಂತರ ರಾಜೀನಾಮೆ ನೀಡಿದ ಘೋಷ್ ಈಗಾಗಲೇ ಹಲವು ಬಾರಿ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಘೋಷ್‌ ಅವರನ್ನು ಸಿಬಿಐ ಮಂಗಳವಾರ ಕೂಡ ವಿಚಾರಣೆಗೆ ಒಳಪಡಿಸಿತ್ತು. ವೈದ್ಯೆಯ ಸಾವಿನ ಸುದ್ದಿ ತಿಳಿದ ನಂತರ ಘೋಷ್ ಅವರು ವಹಿಸಿರುವ ಪಾತ್ರವೇನು? ಅವರು ಯಾರನ್ನೆಲ್ಲ ಸಂಪರ್ಕಿಸಿದರು? ತಮ್ಮ ಮಗಳ ಶವ ನೋಡಲು ಬಂದ ಪೋಷಕರನ್ನು ಸುಮಾರು 3 ತಾಸು ಏಕೆ ಕಾಯಿಸಲಾಯಿತು? ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಕೆಯ ಶವ ಪತ್ತೆಯಾದ ನಂತರ ಅದರ ಪಕ್ಕದ ಕೊಠಡಿಗಳನ್ನು ನವೀಕರಿಸಲು ಅನುಮತಿ ನೀಡಿದ್ದೇಕೆ ಎನ್ನವು ಬಗ್ಗೆಯೂ ಹಲವು ಪ್ರಶ್ನೆಗಳನ್ನು ಘೋಷ್‌ ಅವರಿಗೆ ಸಿಬಿಐ ಅಧಿಕಾರಿಗಳು ಕೇಳಿದ್ದಾರೆ. ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ಸಂಜಯ್ ರಾಯ್‌ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಬಿಐ ಈ ಮೊದಲೇ ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆದಿತ್ತು.

                 ಸಂದೀಪ್‌ ಘೋಷ್‌ ವಿರುದ್ಧ ಇ.ಡಿ ತನಿಖೆಗೆ ಕೋರ್ಟ್‌ ಮೊರೆ

             ಕೋಲ್ಕತ್ತ: ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಈ ಹಿಂದಿನ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅವರು ತಮ್ಮ ಆಡಳಿತ ಅವಧಿಯಲ್ಲಿ ಹಣಕಾಸು ಅಕ್ರಮಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿ ಇದೇ ಆಸ್ಪತ್ರೆಯ ಮಾಜಿ ಉಪ ಅಧೀಕ್ಷಕರೊಬ್ಬರು ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಗೆ ನಿರ್ದೇಶನ ನೀಡುವಂತೆ ಕಲ್ಕತ್ತಾ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರು ಅಖ್ತರ್ ಅಲಿ ಅವರಿಗೆ ಅರ್ಜಿ ಸಲ್ಲಿಸಲು ಅನುಮತಿಸಿದರು. ಘೋಷ್ ವಿರುದ್ಧದ ಹಣಕಾಸು ಅಕ್ರಮಗಳ ಬಗ್ಗೆ ಇ.ಡಿ ತನಿಖೆಗೆ ಆದೇಶಿಸುವಂತೆ ಅಖ್ತರ್‌ ಅಲಿ ಅರ್ಜಿಯಲ್ಲಿ ಕೋರಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries