ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಜಾಮೀನು ಮಂಜೂರು ಮಾಡಿದೆ ಎಂದು 'ಲೈವ್ ಲಾ' ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಹಾಗೂ ಕೆ.ವಿ ವಿಶ್ವನಾಥನ್ ಅವರ ಪೀಠವು ಕವಿತಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದೆ.
ತಮಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಕವಿತಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ನ್ಯಾಯಾಲಯವು, ಅವರು ಕೋರಿರುವ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯಗಳಿಗೆ (ಇ.ಡಿ) ನೋಟಿಸ್ ನೀಡಿತ್ತು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಅದೇ ರೀತಿ ಎಎಪಿ ನಾಯಕ ಮನೀಷ್ ಸಿಸೋಡಿಯಾ ಅವರಿಗೆ ಜಾಮೀನು ನೀಡಿದೆ. ಈ ತೀರ್ಪುಗಳನ್ನು ಕವಿತಾ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಕವಿತಾ ಅವರು ತಮ್ಮ ಮೊಬೈಲ್ ಅನ್ನು ನಾಶಪಡಿಸಿದ್ದಾರೆ. ಜತೆಗೆ, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ತನಿಖಾ ಸಂಸ್ಥೆಗಳ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಪ್ರತಿಪಾದಿಸಿದ್ದಾರೆ. ಆದರೆ, ರೋಹಟಗಿ ಅವರು ಕವಿತಾ ಮೇಲಿನ ಆರೋಪಗಳನ್ನು ಬೋಗಸ್ ಎಂದು ಬಣ್ಣಿಸಿದ್ದಾರೆ.
ಕವಿತಾ ವಿರುದ್ಧ ಪ್ರತ್ಯೇಕ ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಗಳನ್ನು ಇ.ಡಿ ಮತ್ತು ಸಿಬಿಐ ದಾಖಲಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್ 15ರಂದು ಇ.ಡಿ ಕವಿತಾ ಅವರನ್ನು ಬಂಧಿಸಿತ್ತು. ಇವರು ನ್ಯಾಯಾಂಗ ಬಂಧನದಲ್ಲಿ ಇದ್ದ ಅವಧಿಯಲ್ಲೇ ಏಪ್ರಿಲ್ 11ರಂದು ಸಿಬಿಐ ಬಂಧಿಸಿತ್ತು.
ವಿಚಾರಣಾ ನ್ಯಾಯಾಲಯವು ಜಾಮೀನು ನಿರಾಕರಿಸಿದ ಬಳಿಕ ಕವಿತಾ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, 'ತನಿಖೆ ನಿರ್ಣಾಯಕ ಹಂತದಲ್ಲಿರುವುದರಿಂದ ಸದ್ಯಕ್ಕೆ ಜಾಮೀನು ನೀಡಲಾಗುವುದಿಲ್ಲ' ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿ ಜುಲೈ 1ರಂದು ಹೈಕೋರ್ಟ್ ಆದೇಶ ನೀಡಿತ್ತು.