ಮಂಜೇಶ್ವರ: ತಾಲೂಕಿನ ಒಳ ಗ್ರಾಮಗಳಲ್ಲಿ ಬಸ್ ಸೌಲಭ್ಯಗಳ ಕೊರತೆಯಿಂದ ಜನರು ತೀವ್ರ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಪ್ರಸ್ತುತ, ಮಂಜೇಶ್ವರ ತಾಲೂಕಿನ ಕುಂಬಳೆ ಪಂಚಾಯತಿಯಲ್ಲಿ ಮಾತ್ರ ಗ್ರಾಮಬಂಡಿ ಯೋಜನೆ ಅಳವಡಿಸಲಾಗಿದೆ. ಇದೇ ಮಾದರಿಯನ್ನು ಮಂಜೇಶ್ವರದಲ್ಲಿ ಅಳವಡಿಸಿದರೆ, ಸ್ಥಳೀಯರ ಪ್ರಯಾಣದ ಕಷ್ಟವನ್ನು ಪರಿಹರಿಸಬಹುದೆಂಬುದು ಸ್ಥಳೀಯರ ಹೇಳಿಕೆ.
ಮಂಜೇಶ್ವರ, ವರ್ಕಾಡಿ, ಪೈವಳಿಕೆ, ಮೀಂಜ, ಪುತ್ತಿಗೆ ಪಂಚಾಯತಿಗಳ ಒಳನಾಡಿನ ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವವರು ಬಸ್ ಸೌಲಭ್ಯಗಳ ಕೊರತೆಯಿಂದ ತೊಂದರೆಗೊಳಗಾಗಿದ್ದಾರೆ. ವರ್ಕಾಡಿ ಪಂಚಾಯತಿ ವ್ಯಾಪ್ತಿಯಲ್ಲಿರುವ ಕರ್ನಾಟಕ-ಕೇರಳ ಗಡಿಯಲ್ಲಿ ಪ್ರಯಾಣ ಸಮಸ್ಯೆಯನ್ನು ವರ್ಷಗಳಿಂದ ಎದುರಿಸುತ್ತಿರುವ ಪ್ರಮುಖ ಪ್ರದೇಶವಾಗಿದೆ.
ಬಾಕ್ರಬೆಲ್ ಮತ್ತು ಪಾತೂರು ಮಲೆನಾಡು ಪ್ರದೇಶಗಳಲ್ಲಿ ಉತ್ತಮ ರಸ್ತೆಗಳಿದ್ದರೂ, ಬಸ್ ಸೌಲಭ್ಯಗಳ ಕೊರತೆಯಿದೆ. ಹೊಸಂಗಡಿಗೆ 19 ಕಿಮೀ ದೂರವಿರುವ ಈ ಮಾರ್ಗದಲ್ಲಿ ಬಸ್ ಸೇವೆಗಳು ಬಹಳ ವಿರಳವಾಗಿವೆ. ಬಿ.ಸಿ.ರೋಡ್ ರಸ್ತೆ, ಬಾಕ್ರಬೆಲ್-ವರ್ಕಾಡಿ- ಹೊಸಂಗಡಿ ರೂಟಿನಲ್ಲಿ ಬಸ್ ಮಾರ್ಗವಿದ್ದರೂ, ಬಸ್‍ಗಳು ಸೇವೆ ಲಭ್ಯವಿಲ್ಲ. ಕೇರಳ-ಕರ್ನಾಟಕ ಗಡಿಯಲ್ಲಿ ಇರುವ ಈ ಗ್ರಾಮಗಳಿಗೆ ಕರ್ನಾಟಕ ಕೆ.ಎಸ್.ಆರ್.ಟಿ.ಸಿ.ಯಿಂದ ಬಸ್ ಸೌಲಭ್ಯ ಸಿಗುತ್ತಿಲ್ಲವೆಂದು ಊರವರು ಹೇಳುತಿದ್ದಾರೆ.
ನಂದಾರಪದವು- ಸುಂಕದಕಟ್ಟೆ-ಕಾಸರಗೋಡು ಮಾರ್ಗದಲ್ಲಿ ಬಸ್ ಸೇವೆ ನೀಡುವಂತೆ ಜನಪ್ರತಿನಿಧಿಗಳು ಮತ್ತು ಸಂಘಟನೆಗಳು ಕೇರಳ ಮತ್ತು ಕರ್ನಾಟಕ ಸರ್ಕಾರದ ದಕ್ಷಿಣ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಈ ಮಾರ್ಗವನ್ನು ಬಸ್ ಸೇವೆಗಳಿಗೆ ಒದಗಿಸಲು ಈವರೆಗೂ ಕ್ರಮ ಕೈಗೊಳ್ಳಲಾಗಿಲ್ಲ. ಪೈವಳಿಗೆ-ಚೇವಾರ್-ಪೆರ್ಮುದೆ ಮಾರ್ಗದಲ್ಲೂ ಬಸ್ ಸೌಲಭ್ಯವಿಲ್ಲದಿರುವುದು ಸ್ಥಳೀಯರಿಗೆ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ.