ನವದೆಹಲಿ: ಕಳೆದ ಕೆಲ ದಿನಗಳಿಂದ ಕೆಲವೆಡೆ ವ್ಯಾಪಕ ಮಳೆ ಬೀಳುತ್ತಿರುವ ಕಾರಣ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿನ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಹೆಚ್ಚಳವಾಗಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಜಲಾಶಯಗಳ ನೀರಿನ ಮಟ್ಟದಲ್ಲಿ ಶೇ 126ರಷ್ಟು ಹೆಚ್ಚಳ ದಾಖಲಾಗಿದೆ.
ಆಗಸ್ಟ್ 29ರಂದು ಸಂಗ್ರಹಿಸಿದ ಮಾಹಿತಿಯಂತೆ, ದೇಶದ ಜಲಾಶಯಗಳಲ್ಲಿ 144.333 ಶತಕೋಟಿ ಘನ ಮೀಟರ್(ಬಿಸಿಎಂ) ಇದೆ. ಇದು, ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 80ರಷ್ಟಾಗಲಿದೆ ಎಂದು ಆಯೋಗ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡುಗಳಲ್ಲಿನ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ. ಈ ರಾಜ್ಯಗಳಲ್ಲಿರುವ ಒಟ್ಟು 43 ಜಲಾಶಯಗಳಲ್ಲಿ 44.771 ಶತಕೋಟಿ ಘನ ಮೀಟರ್‌ನಷ್ಟು ನೀರು ಸಂಗ್ರಹವಾಗಿದೆ. ಇದು ಇವುಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 82ರಷ್ಟಾಗುವುದು ಎಂದು ಆಯೋಗ ಹೇಳಿದೆ.
ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಭಾಗದ ರಾಜ್ಯಗಳಲ್ಲಿರುವ ಜಲಾಶಯಗಳಲ್ಲಿ ನೀರು ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದಿದೆ.
ಉತ್ತರದ ರಾಜ್ಯಗಳಾದ ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನದ ಜಲಾಶಯಗಳಲ್ಲಿ ನೀರು ಸಂಗ್ರಹ ಕುಸಿದಿದೆ. ಆಯೋಗ ಮೇಲ್ವಿಚಾರಣೆ ನಡೆಸುವ ಈ ರಾಜ್ಯಗಳ 11 ಜಲಾಶಯಗಳಲ್ಲಿ ಸದ್ಯ 11.866 ಶತಕೋಟಿ ಘನ ಮೀಟರ್‌ನಷ್ಟು ನೀರು ಸಂಗ್ರಹ ಇದೆ. ಇದು, ಎಲ್ಲ ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 60ರಷ್ಟಾಗುತ್ತದೆ.
ಪ್ರಮುಖ ಅಂಶಗಳು
ದೇಶದ ಜಲಾಶಯಗಳಲ್ಲಿನ ನೀರು ಸಂಗ್ರಹ ಒಟ್ಟಾರೆ ಆಶಾದಾಯಕವಾಗಿದೆ.
ಕಳೆದ ವರ್ಷದ ನೀರಿನ ಮಟ್ಟ ಹಾಗೂ ವಾಡಿಕೆ ಮಟ್ಟಕ್ಕಿಂತಲೂ ಹೆಚ್ಚು ನೀರು ಸಂಗ್ರಹ ಇದೆ.
ಗಂಗಾ ಮಹಾನದಿ ನರ್ಮದಾ ಮತ್ತು ಗೋದಾವರಿ ನದಿಪಾತ್ರಗಳಲ್ಲಿನ ಜಲಾಶಯಗಳಲ್ಲಿ ವಾಡಿಕೆ ಮಟ್ಟಕ್ಕಿಂತ ಹೆಚ್ಚು ನೀರು ಸಂಗ್ರಹ ಕಂಡುಬಂದಿದೆ
ಸಿಂಧು ಪೆನ್ನಾರ್ ಮತ್ತು ಕನ್ಯಾಕುಮಾರಿ ನದಿಗಳ ನಡುವಿನ ಪ್ರದೇಶದಲ್ಲಿನ ಪೂರ್ವ ದಿಕ್ಕಿಗೆ ಹರಿಯುವ ನದಿಪಾತ್ರಗಳಲ್ಲಿ ಕೊರತೆ ಕಂಡುಬಂದಿದೆ .