ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಉಪವರ್ಗೀಕರಣದ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ವಿರೋಧಿಸಿ ಹಲವು ಗುಂಪುಗಳು ಬುಧವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ದೇಶಾದ್ಯಂತ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ಪ್ರದೇಶಗಳಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ಬಹುತೇಕ ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಜಾರ್ಖಂಡ್ ನಲ್ಲಿ ಉತ್ತಮ ಪ್ರತಿಕ್ರಿಯೆ
ವಿವಿಧ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳಿಂದ ಬಂದ್‌ಗೆ ಮಿಶ್ರ ಬೆಂಬಲ ದೊರೆತಿದ್ದು, ಜಾರ್ಖಂಡ್‌ನಲ್ಲಿ, ಸಾರ್ವಜನಿಕ ಬಸ್ ಸಂಚಾರ ಸ್ಥಗಿತವಾಗಿದೆ. ರಾಜ್ಯದ ರಾಜಧಾನಿ ರಾಂಚಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಶಾಲೆಗಳು ಮುಚ್ಚಲ್ಪಟ್ಟವು. ಮುಷ್ಕರದಿಂದಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ಪಲಾಮು ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಳಗೊಂಡ ರಾಜ್ಯದ ಆಡಳಿತ ಮೈತ್ರಿಕೂಟವು ಎಡಪಕ್ಷಗಳೊಂದಿಗೆ ಬಂದ್‌ಗೆ ಬೆಂಬಲ ನೀಡಿದೆ. ಬೆಂಬಲದ ಹೊರತಾಗಿಯೂ, ಬಂದ್ ಪರಿಣಾಮವು ರಾಜ್ಯದಾದ್ಯಂತ ಅಸಮವಾಗಿತ್ತು. ಕೆಲವು ಭಾಗಗಳು ಪ್ರತಿಭಟನೆಗೆ ಸಾಕ್ಷಿಯಾದರೆ, ಇತರ ಪ್ರದೇಶಗಳಲ್ಲಿ ಎಂದಿನಂತೆ ವಾಣಿಜ್ಯ ವ್ಯವಹಾರ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬೆಂಬಲದ ಹೊರತಾಗಿಯೂ ಮಿಶ್ರಪ್ರತಿಕ್ರಿಯೆ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದ ಹೊರತಾಗಿಯೂ ಬಂದ್ ಮಿಶ್ರಪ್ರತಿಕ್ರಿಯೆ ಪಡೆದಿದೆ. ಬಂದ್ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಗೃಹ ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿತ್ತು. ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿದರು, ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆದಾಗ್ಯೂ, ರಾಜ್ಯದಲ್ಲಿ ಬಂದ್‌ನ ಒಟ್ಟಾರೆ ಪರಿಣಾಮವು ಕಡಿಮೆಯಾಗಿದೆ, ಅಧಿಕಾರಿಗಳು ಅಡೆತಡೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.