ತಿರುವನಂತಪುರ: ಅರ್ಧಕ್ಕೆ ಶಾಲೆ ಬಿಟ್ಟಿದ್ದ ಪೌರ ಕಾರ್ಮಿಕರೊಬ್ಬರು ತಮ್ಮ ಜೀವಾನುಭವದ ಕುರಿತು ಬರೆದ ಪುಸ್ತಕವು ಕೇರಳದ ಎರಡು ವಿಶ್ವವಿದ್ಯಾಲಯಗಳ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯದ ಭಾಗವಾಗಿದೆ.
ರಾಜಧಾನಿ ತಿರುವನಂತಪುರದ ಸಚಿವಾಲಯದ ಸಮೀಪದಲ್ಲಿರುವ 'ಚೆಂಕಲ್ ಚೂಳ ಕಾಲೊನಿ' ಎಂದೇ ಖ್ಯಾತಿ ಪಡೆದಿರುವ ರಾಜಾಜಿನಗರದ ನಿವಾಸಿ ಧನುಜಾ ಕುಮಾರಿ ಅವರು ಬರೆದ 'ಚೆಂಕಲ್ ಚೂಳಿಯೇ ಎಂಟೆ ಜೀವಿತಂ' (ಚೆಂಕಲ್ ಚೂಳದಲ್ಲಿ ನನ್ನ ಜೀವನ) ಕೃತಿಯು ಅವರ ಜೀವನದ ಅನುಭವಗಳನ್ನು ಒಳಗೊಂಡಿದೆ.
ಸ್ವಾತಂತ್ರ್ಯೋತವದ ದಿನದ ಅಂಗವಾಗಿ ಗುರುವಾರ ಧನುಜಾ ಹಾಗೂ ಕುಟುಂಬ ಸದಸ್ಯರನ್ನು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ರಾಜಭವನಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದರು.
ರಾಜ್ಯಪಾಲರ ಭೇಟಿ ವೇಳೆ ಭಾವುಕರಾದ ಧನುಜಾ, 'ಅತ್ಯಂತ ಹಿಂದುಳಿದ ಪರಿಸ್ಥಿತಿಯಲ್ಲಿರುವ ನಾನು ಜೀವನದಲ್ಲಿ ಅಂತಹ ಕ್ಷಣವನ್ನು ಊಹಿಸಲು ಸಾಧ್ಯವಿಲ್ಲ' ಎಂದು 'ಪ್ರಜಾವಾಣಿ' ಜೊತೆ ಅನುಭವ ಹಂಚಿಕೊಂಡರು.
ಈ ಪ್ರದೇಶದಲ್ಲಿರುವ ಅನೇಕರಂತೆ ಧನುಜಾ ಅವರು ಕೂಡ ಶಾಲೆಯನ್ನು ಬಿಟ್ಟಿದ್ದಾರೆ. ಈ ಕಾಲೊನಿಯಲ್ಲಿ ಅನೇಕರು ಅಪರಾಧ ಕೃತ್ಯಗಳಿಂದ ಭಾಗಿಯಾಗಿದ್ದರಿಂದ ಕುಖ್ಯಾತಿಯೂ ಪಡೆದಿದ್ದರು.
ಧನುಜಾ ಕುಮಾರಿ ಅವರು ಈಗ 'ಹರಿತಾ ಕರ್ಮಾ ಸೇನಾ'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ತಂಡವು ಪ್ರತಿ ಮನೆಗಳಿಂದಲೂ ತ್ಯಾಜ್ಯ ಸಂಗ್ರಹಿಸುವ ಕೆಲಸ ಮಾಡುತ್ತಿದೆ.
ತಮ್ಮ ಕಾಲೊನಿಯಲ್ಲಿ ಅನುಭವಿಸಿದ ಜೀವನದ ಅನುಭವಗಳನ್ನೇ ಧನುಜಾ ಅವರು ಬರೆಯಲು ಆರಂಭಿಸಿದರು. 2014ರಲ್ಲಿ ಸಾಂಸ್ಕೃತಿಕ ಕಲಾವಿದರ ತಂಡವೊಂದು ಇಲ್ಲಿಗೆ ಭೇಟಿ ನೀಡಿದ್ದ ಇವರ ಬರವಣಿಗೆಯನ್ನು ಗುರುತಿಸಿ, ಲೇಖಕಿ ವಿಜಿಲಾ ಅವರಿಗೆ ಪರಿಚಯಿಸಿದರು. ಈ ಬರವಣಿಗೆ ಓದಿ ವಿಜಿಲಾ ಅವರು ಪುಸ್ತಕ ಬರೆದು, ಮುದ್ರಿಸಲು ಪ್ರೋತ್ಸಾಹಿಸಿದರು. ಕಾಲೊನಿಯಲ್ಲಿ ಸಮುದಾಯದವರು ಎದುರಿಸುತ್ತಿರುವ ತಾರತಮ್ಯವನ್ನು ಕೃತಿಯು ಒಳಗೊಂಡಿದೆ. ಅವರ ಮಗ ಕೇರಳ ಸರ್ಕಾರದ ಸ್ವಾಯತ್ತ ಸಂಸ್ಥೆ 'ಕಲಾಮಂಡಲಂ' ಕಲಿಯುತ್ತಿದ್ದ ವೇಳೆ ಕೂಡ ಸಾಕಷ್ಟು ಅವಮಾನಕ್ಕೆ ಒಳಗಾಗಿದ್ದರು.
ಧನುಜಾ ಅವರ ಬರವಣಿಗೆಗೆ ಕುಟುಂಬದಿಂದಲೂ ಸಾಕಷ್ಟು ಬೆಂಬಲ ಸಿಕ್ಕಿದೆ. ಅವರ ಪತಿ ಚೆಂಡೆ ವಾದಕರಾಗಿದ್ದು, ಮಕ್ಕಳಾದ ನಿಧೀಶ್, ಸುಧೀಶ್ ಅವರು ಕಲಾವಿದರಾಗಿದ್ದಾರೆ.
ಮೊದಲ ಪುಸ್ತಕಕ್ಕೆ ಸಿಕ್ಕ ಪ್ರೋತ್ಸಾಹದಿಂದ 'ಚೆಂಕಲ್ ಚೂಳ ಹಿಸ್ಟರಿ' ಪುಸ್ತಕ ಬರೆಯಲು ಸಿದ್ಧತೆ ನಡೆಸಿದ್ದಾರೆ. ತಮ್ಮ ಕಾಲೊನಿಯಲ್ಲಿ ಗ್ರಂಥಾಲಯ ತೆರೆಯಲು ಮುಂದಾಗಿದ್ದಾರೆ.