ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಜನರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿದೆ. ಹಾಗಂತ ಅತಿಯಾದ ಆತ್ಮವಿಶ್ವಾಸ ಮತ್ತು ಅಲಕ್ಷ್ಯ ಒಳ್ಳೆಯದಲ್ಲ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಎಚ್ಚರಿಸಿದ್ದಾರೆ.
ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಿಪಿಪಿ ಸಭೆಯಲ್ಲಿ ಮಾತನಾಡಿದ ಅವರು, 'ಪಕ್ಷದ ನಾಯಕರ ಸದ್ವರ್ತನೆಯೇ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣ. ಹಾಗಂತ ಅತಿಯಾದ ಆತ್ಮವಿಶ್ವಾಸ, ಆಲಸ್ಯ ಬೇಡ; ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಳ್ಳೆಯ ಪ್ರದರ್ಶನ ನೀಡಿದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ' ಎಂದು ಹೇಳಿದರು.
ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.
'ಲೋಕಸಭಾ ಚುನಾವಣೆ ವೇಳೆ ಅತಿಯಾದ ನಿರೀಕ್ಷೆ ಹೊಂದಿದ್ದ ಮೋದಿ ಸರ್ಕಾರವು ದೊಡ್ಡ ಪಾಠ ಕಲಿತಿರುವುದನ್ನು ನೋಡಿದ್ದೇವೆ. ಆದರೂ ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವ, ಭಯ ಮತ್ತು ದ್ವೇಷದ ವಾತಾವರಣ ಬಿತ್ತರಿಸುವ ನೀತಿಯನ್ನು ಮುಂದುವರಿಸಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳು ಮಳಿಗೆಗಳ ಎದುರು ಮಾಲೀಕರ ಹೆಸರು ಪ್ರಕಟಿಸಲು ಸೂಚಿಸಿದ್ದೇ ಅದಕ್ಕೆ ಸಾಕ್ಷಿ. ಅದೃಷ್ಟವಶಾತ್ ಸುಪ್ರೀಂ ಕೋರ್ಟ್ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶ ಮಾಡಿತು' ಎಂದು ಹೇಳಿದರು.
ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಬಾಗಿಯಾಗಲು ಇದ್ದ ನಿರ್ಬಂಧವನ್ನು ತೆರವುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿದ ಅವರು, 'ಅಧಿಕಾರಿಗಳು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಯಮಗಳು ಹೇಗೆ ದಿಢೀರ್ ಬದಲಾಗುತ್ತವೆ ನೋಡಿ. ಆರ್‌ಎಸ್‌ಎಸ್ ತಾನೊಂದು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಳ್ಳುತ್ತದೆ. ಆದರೆ, ಅದು ಬಿಜೆಪಿಯ ರಾಜಕೀಯ ಮತ್ತು ಸೈದ್ಧಾಂತಿಕ ನೆಲೆ ಎಂದು ಎಂದು ಇಡೀ ಜಗತ್ತಿಗೆ ಗೊತ್ತು' ಎಂದರು.
'ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸೋನಿಯಾ ಗಾಂಧಿ, 'ಇತ್ತೀಚೆಗೆ ಜಮ್ಮುವಿನಲ್ಲಿ ಕನಿಷ್ಠ 11 ಉಗ್ರರ ದಾಳಿಗಳು ನಡೆದಿವೆ. ಕಾಶ್ಮೀರದಲ್ಲೂ ಇಂಥ ಘಟನೆ ಮರುಕಳಿಸುತ್ತಿವೆ. ಅನೇಕ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 'ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸುಸ್ಥಿತಿಯಲ್ಲಿದೆ' ಎಂಬ ಮೋದಿ ಸರ್ಕಾರದ ಹೇಳಿಕೆಯನ್ನು ಈ ಘಟನೆಗಳು ಅಣಕಿಸುವಂತಿವೆ' ಎಂದು ವಾಗ್ದಾಳಿ ನಡೆಸಿದರು.
'ಮಣಿಪುರದ ಪರಿಸ್ಥಿತಿ ಸುಧಾರಿಸಿದಂತೆ ಕಾಣುತ್ತಿಲ್ಲ. ಪ್ರಧಾನಿ ಮೋದಿ ಅವರು ಇಡೀ ಜಗತ್ತು ಸುತ್ತುತ್ತಾರೆ; ಆದರೆ ಮಣಿಪುರಕ್ಕೆ ಹೋಗಲು, ಪರಿಸ್ಥಿತಿಯನ್ನು ಸುಧಾರಿಸಲು ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಾರೆ' ಎಂದು ಲೇವಡಿ ಮಾಡಿದರು.
'ಜನಗಣತಿ ನಡೆಸುವ ಉದ್ದೇಶವೇ ಸರ್ಕಾರಕ್ಕೆ ಇದ್ದಂತಿಲ್ಲ. ಜನಗಣತಿ ನಡೆಯದಿದ್ದರೆ ಜನಸಂಖ್ಯೆಯ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗುವುದಿಲ್ಲ. ಇದರರ್ಥ ಕನಿಷ್ಠ 12 ಕೋಟಿ ನಾಗರಿಕರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿಯೂ ರೈತರು, ಯುವಜನರ ಬೇಡಿಕೆಗಳನ್ನು ಕಡೆಗಣಿಸಲಾಗಿದೆ' ಎಂದು ಟೀಕಿಸಿದರು.