ಕೊಚ್ಚಿ: ಮಲಯಾಳ ಚಿತ್ರರಂಗದಲ್ಲಿ ನಟಿಯುರು ಸೇರಿದಂತೆ ಮಹಿಳೆಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇರಳ ಹೈಕೋರ್ಟ್, ಸರ್ಕಾರಕ್ಕೆ ನಿರ್ದೇಶಿಸಿದೆ.
ತಿರುವನಂತಪುರದ ನಿವಾಸಿ ನವಾಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಅಂಗೀಕರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್. ಮನು ಅವರನ್ನೊಳಗೊಂಡ ಪೀಠವು ವರದಿಯಲ್ಲಿ ಗಂಭೀರ ಆರೋಪಗಳಿವೆ ಎಂದು ಹೇಳಿದೆ.
ರಿಟ್ ಅರ್ಜಿಯನ್ನು ಅಂಗೀಕರಿಸಿದ ಹೈಕೋರ್ಟ್, ಸರ್ಕಾರಕ್ಕೆ ಕೌಂಟರ್ ಅಫಿಡವಿಟ್ ಸಲ್ಲಿಸಲು ಸೂಚಿಸಿದೆ. ಜಸ್ಟೀಸ್ ಹೇಮಾ ಸಮಿತಿಯ ವರದಿ ಆಧರಿಸಿ ನಿಮ್ಮ ಮುಂದಿನ ಕ್ರಮ ಏನು ಎಂದು ಕೋರ್ಟ್ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು ದೌರ್ಜನ್ಯ ಕುರಿತಂತೆ ಸಂತ್ರಸ್ತರು ದೂರು ನೀಡದ ಹೊರತು ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಮೂಲ ವರದಿಯಲ್ಲಿ ಎಲ್ಲ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ. ಅದು ಅತ್ಯಂತ ಗೋಪ್ಯ ದಾಖಲೆಯಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಗೋಪ್ಯತೆಯನ್ನು ಖಾತ್ರಿಪಡಿಸಿಕೊಂಡ ನಂತರವೇ ಸಮಿತಿಯು ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದರಿಂದ ಪ್ರಕರಣಗಳನ್ನು ದಾಖಲಿಸುವಲ್ಲಿ ಮಿತಿಗಳನ್ನು ಹೊಂದಿದೆ. ಹಾಗಾಗಿ, ಗೋಪ್ಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲು ಬರುವುದಿಲ್ಲ. ಸಂತ್ರಸ್ತರು ಮುಂದೆ ಬಂದು ದೂರು ನೀಡಿದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ವರದಿಯಲ್ಲಿ ಉಲ್ಲೇಖವಾಗಿರುವ ಲೈಂಗಿಕ ದೌರ್ಜನ್ಯಗಳ ಕುರಿತಾದ ಕ್ರಿಮಿನಲ್ ವಿಚಾರಣೆ ಮತ್ತು ಕ್ರಮಕ್ಕೆ ಸರ್ಕಾರಕ್ಕೆ ಸೂಚಿಸಬೇಕು ಹಾಗೂ ಮೂಲ ವರದಿಯನ್ನು ಪ್ರಕಟಿಸಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿತ್ತು.
ಮಲಯಾಳ ಚಿತ್ರರಂಗದಲ್ಲಿ ಸಿನಿಮಾ ಕಲಾವಿದೆಯರ ಮೇಲಿನ ಲೈಂಗಿಕ ಕಿರುಕುಳ, ಶೋಷಣೆ ಮತ್ತು ಅವರ ಜೊತೆಗಿನ ಅಸಭ್ಯ ನಡವಳಿಕೆ ಕುರಿತಾದ ಬಹು ನಿರೀಕ್ಷಿತ ವರದಿಯು ಸೋಮವಾರ(ಆ.19) ಬಿಡುಗಡೆ ಆಗಿತ್ತು. ಒಂದು ಕ್ರಿಮಿನಲ್‌ಗಳ ಗುಂಪು ಉದ್ಯಮವನ್ನು ನಿಯಂತ್ರಿಸುತ್ತಿದ್ದು, ತಮಗೆ ಸಹಕರಿಸದ ಕಲಾವಿದೆಯರನ್ನು ಹೊರ ಹಾಕಿದೆ ಎಂದೂ ಉಲ್ಲೇಖಿಸಲಾಗಿತ್ತು.
2017ರಲ್ಲಿ ನಟ ದಿಲೀಪ್ ಹೆಸರು ಕೇಳಿಬಂದಿದ್ದ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಬಳಿಕ ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮತ್ತು ಲಿಂಗ ಅಸಮಾನತೆ ಕುರಿತ ಅಧ್ಯಯನಕ್ಕೆ ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು.