ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತರ ಪ್ರೇಮ ಪ್ರಕರಣದ ಮಧ್ಯೆ ಬಾಲಕನ ತಂದೆಯ ನಿಗೂಢ ಸಾವು ನಡೆದಿದ್ದು, ಈ ಬಗ್ಗೆ ಪೊಲೀಸ್ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ. ಮೃತಪಟ್ಟ 52ರ ಹರೆಯದ ವ್ಯಕ್ತಿ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ವಾಪಸಾದ ಬಳಿಕ ನಿರ್ಮಾಣ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಎರಡು ವಾರದ ಹಿಂದೆ ವ್ಯಕ್ತಿ ಮನೆಯಲ್ಲಿ ಕುಸಿದು ಬಿದ್ದಿದ್ದು, ಇವರನ್ನು ಕಾಞಂಗಾಡಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದಾಗ ವೈದ್ಯರು ಸಾವು ಖಚಿತಪಡಿಸಿದ್ದರು. ಆದರೆ, ಪೊಲೀಸ್ ಠಾಣೆಗೆ ಮಾಹಿತಿ ನೀಡದೆ, ಅಂತ್ಯಸಂಸ್ಕಾರ ನಡೆಸಲಾಗಿದ್ದು, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿತ್ತು. ವ್ಯಕ್ತಿ ಮೃತಪಟ್ಟ ದಿನ ಮನೆಯಲ್ಲಿ ಹೊಡೆದಾಟವೂ ನಡೆದಿತ್ತೆನ್ನಲಾಗಿದೆ.
ಮೃತಪಟ್ಟ ವ್ಯಕ್ತಿಯ 17ರ ಹರೆಯದ ಪುತ್ರ ಹಾಗೂ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಮಧ್ಯೆ ಪ್ರೇಮ ಹೊಂದಿದ್ದು, ಇದನ್ನು ವ್ಯಕ್ತಿ ಪ್ರಶ್ನಿಸಿರುವುದರಿಂದ ಪರಸ್ಪರ ಹೊಡೆದಾಟ, ತುಳಿತ ನಡೆದಿತ್ತೆನ್ನಲಾಗಿದೆ. ಸಾವಿನ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ.