ನವದೆಹಲಿ: ರಾಷ್ಟ್ರ ರಾಜಧಾನಿಯ ಹಳೆ ರಾಜಿಂದರ್ ನಗರ ಪ್ರದೇಶದ ಕೋಚಿಂಗ್ ಕೇಂದ್ರದ ಸಹ ಮಾಲೀಕರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಇಲ್ಲಿನ ತೀಸ್ ಹಜಾರಿ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.
'ರಾವ್ಸ್ ಐಎಎಸ್ ಸ್ಟಡಿ ಸರ್ಕಲ್' ಕೋಚಿಂಗ್ ಕೇಂದ್ರ ಇದ್ದ ಕಟ್ಟಡದ ನೆಲಮಹಡಿಗೆ ಮಳೆ ನೀರು ನುಗ್ಗಿದ್ದರಿಂದ ಮೂವರು ವಿದ್ಯಾರ್ಥಿಗಳು ಕಳೆದ ವಾರ (ಜುಲೈ 27ರಂದು) ಮೃತಪಟ್ಟಿದ್ದರು.
ದೆಹಲಿ ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಶುಕ್ರವಾರ ಸಿಬಿಐಗೆ ವಹಿಸಿತ್ತು. 'ತನಿಖೆಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಅನುಮಾನ ಮೂಡಬಾರದು ಎಂಬ ಉದ್ದೇಶದಿಂದ ಸಿಬಿಐಗೆ ಒಪ್ಪಿಸಲಾಗಿದೆ' ಎಂದು ಒತ್ತಿ ಹೇಳಿತ್ತು.
ಕೇರಳದ ಎರ್ನಾಕುಳಂ ಜಿಲ್ಲೆಯ ನವೀನ್ ಡೆಲ್ವಿನ್, ತೆಲಂಗಾಣದಲ್ಲಿ ನೆಲೆಸಿರುವ ಬಿಹಾರದ ಔರಂಗಾಬಾದ್‌ನ ತಾನ್ಯಾ ಸೋನಿ ಮತ್ತು ಉತ್ತರ ಪ್ರದೇಶದ ಶ್ರೇಯಾ ಯಾದವ್ ಎಂಬವರು ದುರ್ಘಟನೆಯಲ್ಲಿ ಮೃತಪಟ್ಟಿದ್ದರು. ಈ ಮೂವರೂ ನಾಗರಿಕ ಸೇವಾ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು.
ದೆಹಲಿ ವಿಶ್ವವಿದ್ಯಾಲಯದ ಮಹಾರಾಜಾ ಅಗ್ರಸೇನ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ತಾನ್ಯಾ, ಒಂದೂವರೆ ತಿಂಗಳ ಹಿಂದೆ ಹಾಗೂ ಬಿಎಸ್‌ಸಿ (ಕೃಷಿ) ವ್ಯಾಸಂಗ ಮಾಡಿರುವ ಶ್ರೇಯಾ, ಎರಡು ತಿಂಗಳ ಹಿಂದೆಯಷ್ಟೇ ರಾವ್ಸ್ ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಿದ್ದರು.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡುತ್ತಿದ್ದ ನವೀನ್, ಎಂಟು ತಿಂಗಳಿನಿಂದ ಇಲ್ಲಿ ತರಬೇತಿ ಪಡೆಯುತ್ತಿದ್ದರು.