ವಯನಾಡು: ಚುರಲ್ಮಲಾ ಭೂಕುಸಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದರು. ಪ್ರಧಾನಿಯವರು ಕಲ್ಪೆಟ್ಟಾದಿಂದ ರಸ್ತೆ ಮಾರ್ಗವಾಗಿ ಇಲ್ಲಿಗೆ ತಲುಪಿದರು.
ಚುರಲ್‍ಮಲಾ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅವರು ದುರಂತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೆಲ್ಲರ್ಮಲಾ ಸ್ಕೂಲ್ ರಸ್ತೆಗೆ ಮೊದಲು ಭೇಟಿ ನೀಡಿದರು. ತಮ್ಮ ವಾಹನದಿಂದ ಪ್ರಧಾನಿಯವರು ಭೂಕುಸಿತದಿಂದ ಹಾನಿಗೀಡಾದ ವೆಲ್ಲರ್ಮಲಾ ಜಿವಿಎಚ್‍ಎಸ್ ಶಾಲೆ ಮತ್ತು ಮನೆಗಳನ್ನು ವೀಕ್ಷಿಸಿದರು. ನಂತರ ಕಾಲ್ನಡಿಗೆಯಲ್ಲಿ ಭೂಕುಸಿತದಿಂದ ಹಾನಿಗೀಡಾದ ಚುರಲ್ಮಲಾ ಶಾಲಾ ರಸ್ತೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು.
ಸುಮಾರು ಅರ್ಧ ಕಿ.ಮೀ ಅಂತರದಲ್ಲಿರುವ ಈ ಸ್ಥಳಗಳಿಗೆ ಪ್ರಧಾನಿ ಭೇಟಿ ನೀಡಿರುವರು. . ಇಲ್ಲಿಂದ ಚುರಲ್ಮಲಾದಲ್ಲಿ ಬೈಲಿ ಸೇತುವೆಯನ್ನು ದಾಟಿ ಮತ್ತೊಂದು ಬದಿಗೆ ತೆರಳಿದರು. ನಂತರ ಇನ್ನೊಂದು ಬದಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಸೈನಿಕರನ್ನು ಭೇಟಿಯಾದರು. ಶಾಲಾ ರಸ್ತೆಯಲ್ಲಿ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ರಕ್ಷಣಾ ಕಾರ್ಯಾಚರಣೆ ಹಾಗೂ ಅನಾಹುತದ ಬಗ್ಗೆ ವಿವರಿಸಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಕೂಡ ಪ್ರಧಾನಿ ಜೊತೆಯಲ್ಲಿದ್ದರು. ದುರಂತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮೆಪ್ಪಾಡಿಯ ಖಾಸಗಿ ಆಸ್ಪತ್ರೆ ಹಾಗೂ ಭೂಕುಸಿತ ಸಂತ್ರಸ್ತರ ಶಿಬಿರಕ್ಕೂ ಪ್ರಧಾನಿ ಭೇಟಿ ನೀಡಿದರು. ಪ್ರಧಾನ ಮಂತ್ರಿಗಳು ಮಧ್ಯಾಹ್ನ 3 ಗಂಟೆಯವರೆಗೆ ವಯನಾಡಿನ ವಿಪತ್ತು ಪ್ರದೇಶದಲ್ಲಿದ್ದರು.