ಕಾಸರಗೋಡು: ಉದುಮ ಗ್ರಾ.ಪಂ. ವ್ಯಾಪ್ತಿಯಲ್ಲಿ ತೀವ್ರ ಕಡಲ್ಕೊರೆತ ತಡೆಯಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ಮನವಿ ಮಾಡಿದೆ.
ಬೇಕಲ, ಕೋಟಿಕುಳಂ ಮತ್ತು ಉದುಮಾ ಪಶ್ಚಿಮದ ಕರವಳಿ ಪ್ರದೇಶದ ಜನತೆ ತೀವ್ರ ಸಮುದ್ರ ಕೊರೆತದ ಸಮಸ್ಯೆ ಅನುಭವಿಸುತ್ತಿದ್ದಾರೆ.
ದಕ್ಷಿಣಕಾಶಿ ಎಂದು ಕರೆಯಲ್ಪಡುವ ತ್ರಿಕನ್ನಾಡ್ ದೇವಸ್ಥಾನದ ಮುಂಭಾಗದ ಕರಾವಳಿ ಪ್ರದೇಶವು ಸಮುದ್ರ ದಾಳಿಯಿಂದ ಸಂಪೂರ್ಣವಾಗಿ ನಾಶವಾಗಿದೆ. ಸಮುದ್ರ ಕೊರೆತದಿಂದ ಹೆದ್ದಾರಿಯೊಂದಿಗೆ ದೇವಸ್ಥಾನದ ಸಭಾಂಗಣವೂ ಅಪಾಯ ಎದುರಿಸುತ್ತಿದೆ. ಕಾಞಂಗಾಡು-ಕಾಸರಗೋಡು ಕೆಎಸ್‍ಟಿಪಿ ರಸ್ತೆ ಅಂಚಿಗೆ ಸಮುದ್ರವಿದ್ದು, ಅಪಾಯ ತಪ್ಪಿಸಲು ತಕ್ಷಣ ತಡೆಗೋಡೆ ಕಾಮಗಾರಿ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ.
ಈ ಪ್ರದೇಶದ ಹಲವು ಮನೆಗಳು ಅಪಾಯದ ಭೀತಿ ಎದುರಿಸುತ್ತಿವೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಮುದ್ರ ಕೊರೆತ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಉದುಮ ಪಶ್ಚಿಮದ ಕರಾವಳಿ ರಸ್ತೆ ಶಿಥಿಲಾವಸ್ಥೆಯಲ್ಲಿದ್ದು, ಇಲ್ಲಿನ ಹಲವು ಕುಟುಂಬಗಳು ದ್ವೀಪವಾಸಿಗಳಂತೆ ಕಾಲಕಳೆಯಬೇಕಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅನೇಕ ಜನರು ಚಿಕಿತ್ಸೆ ಪಡೆಯಲೂ ಕಷ್ಟ ಅನುಭವಿಸುತ್ತಿದ್ದಾರೆ.
ಕುಡಿಯುವ ನೀರು ಪೂರೈಸುವ ಪೈಪುಗಳೂ ಅಲ್ಲಲ್ಲಿ ತುಂಡಗಿ ಈ ಭಾಗದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲು ಮುಂದಾಗಿಲ್ಲ. ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ತುರ್ತು ಗಮನ ಹರಿಸುವಂತೆ ಬಿಜೆಪಿ ಆಗ್ರಹಿಸಿದೆ.