ಲಕ್ನೋ: ಶ್ರೀರಾಮನ ನಗರಿ ಅಯೋಧ್ಯೆಯ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿಯನ್ನು ಹೊಗಳಿ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು... ಮಹಿಳೆಯ ಪತಿ ತ್ರಿವಳಿ ತಲಾಖ್ ನೀಡಿದ್ದು ಅಲ್ಲದೆ ಕತ್ತು ಹಿಸುಕಿ ಕೊಳ್ಳಲು ಯತ್ನಿಸಿದ್ದಾನೆ. ಈ ಸಂಬಂಧ ಪೊಲೀಸರು ಆರೋಪಿ ಹಾಗೂ ಆತನ ಕುಟುಂಬದ ಏಳು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತ ಮಹಿಳೆ ಮೇರಿಯಮ್ ಯುಪಿಯ ಬಹ್ರೈಚ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಹ್ರೈಚ್‌ನ ಜರ್ವಾಲ್ ರೋಡ್ ಪೊಲೀಸ್ ಠಾಣೆಯ ಮೊಹಲ್ಲಾ ಸರೈ ನಿವಾಸಿ ಆಗಿರುವ ಮೇರಿಯಮ್ ಅಯೋಧ್ಯೆಯ ದೆಹಲಿ ದರ್ವಾಜಾ ಮೊಹಲ್ಲಾದ ನಿವಾಸಿ ಅರ್ಷದ್ ಎಂಬಾತನನ್ನು 2023ರ ಡಿಸೆಂಬರ್ 13ರಂದು ವಿವಾಹವಾಗಿದ್ದರು. ಆದರೆ ಅಯೋಧ್ಯೆ ಮತ್ತು ಪ್ರಧಾನಿ ಮತ್ತು ಸಿಎಂ ಅವರನ್ನು ಹೊಗಳಿದ್ದಕ್ಕೆ ಗಂಡನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮದುವೆಯಾದ ಬಳಿಕ ನಗರಕ್ಕೆ ಬಂದಾಗ ಅಯೋಧ್ಯಾ ಧಾಮದ ರಸ್ತೆಗಳು, ಸುಂದರೀಕರಣ, ಅಭಿವೃದ್ಧಿ ಹಾಗೂ ವಾತಾವರಣ ನನಗೆ ತುಂಬಾ ಇಷ್ಟವಾಯಿತು. ಈ ಕುರಿತು ನಾನು ನನ್ನ ಪತಿಯ ಮುಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದೆ. ಇದರಿಂದ ಕೋಪಗೊಂಡ ನನ್ನ ಪತಿ ಅರ್ಷದ್ ಕೋಪಗೊಂಡು ಬಹ್ರೈಚ್‌ನಲ್ಲಿರುವ ತನ್ನ ಪೋಷಕರ ಮನೆಗೆ ಕಳುಹಿಸಿದ್ದನು. ಸ್ವಲ್ಪ ಸಮಯದ ನಂತರ, ಸಂಬಂಧಿಕರ ಮಧ್ಯಸ್ಥಿಕೆಯ ನಂತರ ಮತ್ತೆ ಮೇರಿಯಮ್ ಪತಿಯೊಂದಿಗೆ ವಾಸಿಸಲು ಅಯೋಧ್ಯೆಗೆ ಮರಳಿದಳು ಎಂದು ಜರ್ವಾಲ್ ರೋಡ್ ಪೊಲೀಸ್ ಠಾಣೆಯ ಉಸ್ತುವಾರಿ (ಎಸ್‌ಎಚ್‌ಒ) ಬ್ರಿಜ್ರಾಜ್ ಪ್ರಸಾದ್ ಹೇಳಿದ್ದಾರೆ.
ಕತ್ತು ಹಿಸುಕಲು ಯತ್ನ: ಸಂತ್ರಸ್ತೆ
ಪತ್ನಿ ಹಿಂದಿರುಗಿದ ನಂತರ ಅರ್ಷದ್ ಮುಖ್ಯಮಂತ್ರಿ ಮತ್ತು ಪ್ರಧಾನಿಯನ್ನು ನಿಂದಿಸಿದ್ದು ಅಲ್ಲದೆ ಮೂರು ಬಾರಿ ತಲಾಖ್ ಹೇಳುವ ಮೂಲಕ ತಲಾಖ್ ನೀಡಿದ್ದಾನೆ ಎಂದು ಮಹಿಳೆ ಹೇಳಿದರು. ತನ್ನ ಅತ್ತೆ, ಕಿರಿಯ ಸೊಸೆ ಮತ್ತು ಸೋದರ ಮಾವ ನನ್ನ ಕತ್ತು ಹಿಸುಕಲು ಪ್ರಯತ್ನಿಸಿದರು ಎಂದು ಮೇರಿಯಮ್ ಆರೋಪಿಸಿದ್ದಾರೆ. ಪತಿ ಆಕೆಗೆ ತ್ರಿವಳಿ ತಲಾಖ್ ಹೇಳಿದ ದಿನವೂ ಆಕೆಯನ್ನು ಥಳಿಸಿದ್ದನು.
ಇಡೀ ಕುಟುಂಬದ ವಿರುದ್ಧ ಪ್ರಕರಣ ದಾಖಲು
ಆಕೆಯ ದೂರಿನ ಆಧಾರದ ಮೇಲೆ ಮಹಿಳೆಯ ಪತಿ ಅರ್ಷದ್, ಅತ್ತೆ ರೈಷಾ, ಮಾವ ಇಸ್ಲಾಂ, ಅತ್ತಿಗೆ ಕುಲ್ಸೂಮ್, ಸೋದರ ಮಾವ ಫರಾನ್ ಮತ್ತು ಶಫಾಕ್ ಸೇರಿದಂತೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅತ್ತಿಗೆ ಸಿಮ್ರಾನ್ ವಿರುದ್ಧ ಹಲ್ಲೆ, ದೌರ್ಜನ್ಯ, ಬೆದರಿಕೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಮುಸ್ಲಿಂ ಮಹಿಳೆಯರ (ಮಹಿಳೆಯರ ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.