ಕೊಟ್ಟಾಯಂ: ದುನಿಯಾ ವಿಜಯ್ ನಟನೆಯ ಭೀಮಾ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವ ಪಾತ್ರದಲ್ಲಿ ವಿಜಯ್ ಸೊಗಸಾಗಿ ನಟಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಹೇಗೆಲ್ಲ ಡ್ರಗ್ಸ್ ದಂಧೆ ನಡೆಯುತ್ತಿದೆ ಮತ್ತು ಯುವ ಜನಾಂಗ ಡ್ರಗ್ಸ್ ಚಟಕ್ಕೆ ಬಿದ್ದು ಹೇಗೆ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಡ್ರಗ್ಸ್ ಅನ್ನು ಹೇಗೆಲ್ಲ ಪೂರೈಸುತ್ತಾರೆ ಎಂಬುದನ್ನು ಭೀಮಾ ಚಿತ್ರದಲ್ಲಿ ತೋರಿಸಲಾಗಿದೆ.
ಭೀಮಾ ಚಿತ್ರದಲ್ಲಿ ತೋರಿಸಿರುವಂತೆಯೇ ಡ್ರಗ್ಸ್ ಸಾಗಾಟದ ಆಘಾತಕಾರಿ ಪ್ರಕರಣವೊಂದು ಕೇರಳದಲ್ಲಿ ನಡೆದಿದೆ. ಅಘಾತಕಾರಿ ಸಂಗತಿ ಏನೆಂದರೆ, ಈ ಪ್ರಕರಣಕ್ಕೆ ಬೆಂಗಳೂರಿನ ಲಿಂಕ್ ಕೂಡ ಇದೆ. ಜನ ಸಾಮಾನ್ಯರು ತಿನ್ನುವ ಸಾಮಾನ್ಯ ಬನ್ ಅಥವಾ ಬ್ರೆಡ್ ಮೂಲಕ ಡ್ರಗ್ಸ್ ಸಾಗಿಸುವಾಗ ಕಿಡಿಗೇಡಿಗಳಿಬ್ಬರು ಸಿಕ್ಕಿಬಿದ್ದಿದ್ದಾರೆ.
ಬನ್ ಒಳಗೆ ಎಂಡಿಎಂಎ ಡ್ರಗ್ಸ್ ಇಟ್ಟು ಸಾಗಾಟ ಮಾಡುತ್ತಿದ್ದ ಚಂಗನಾಸ್ಸೆರಿ ಮೂಲದ ಅಂಬಾಡಿ ಬಿಜು ಮತ್ತು ಅಖಿಲ್ ಟಿ.ಎಸ್. ಎಂಬುವರನ್ನು ಬಂಧಿಸಿರುವ ಪೊಲೀಸರು ಬನ್ನಲ್ಲಿ ಅಡಗಿಸಿ ಇಟ್ಟಿದ್ದ 20 ಗ್ರಾಂ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಬನ್ ರೂಪದಲ್ಲಿ ಡ್ರಗ್ಸ್ ಪೂರೈಸುತ್ತಿದ್ದರು ಎಂದು ಹೇಳಲಾಗಿದೆ.
ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಚಂಗನಾಸ್ಸೆರಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇವರಿಬ್ಬರು ಅಂತಾರರಾಜ್ಯ ಬಸ್‌ನಲ್ಲಿ ಬೆಂಗಳೂರಿನಿಂದ ಮಾದಕ ದ್ರವ್ಯ ಸಾಗಾಟ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಎಂಡಿಎಂಎ ಕಳ್ಳಸಾಗಣೆ ಗುಂಪಿನ ಬಗ್ಗೆ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಮೊದಲೇ ಸುಳಿವು ಸಿಕ್ಕಿತ್ತು. ನಂತರದ ಕಾರ್ಯಾಚರಣೆ ವೇಳೆ ಪೆರುನ್ನ ಎನ್‌ಎಸ್‌ಎಸ್ ಕಾಲೇಜು ಬಳಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.