HEALTH TIPS

ಎಡನೀರಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ವಿದುಷಿ ಅಯನಾ ಪೆರ್ಲ ಅವರ ಭರತನಾಟ್ಯ ಪ್ರಸ್ತುತಿ

              ಕಾಸರಗೋಡು: ಎಡನೀರು ಮಠದಲ್ಲಿ ನಡೆಯುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರ ಚತುರ್ಥ ಚಾತುರ್ಮಾಸ್ಯದ ಸಂದರ್ಭದಲ್ಲಿ ಏರ್ಪಾಡಾಗಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ದಿನಾಂಕ 14 ರ ಬುಧವಾರದಂದು ಸಂಜೆ ದೂರದರ್ಶನ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರ ಶಾಸ್ತ್ರೀಯ ಭರತನಾಟ್ಯ ಕಾರ್ಯಕ್ರಮ ಜನಮನ ರಂಜಿಸಿತು. 

         ಕಲಾವಿದೆಯು ಮೊದಲಿಗೆ ದೇವರನ್ನು, ಗುರುಹಿರಿಯರನ್ನು ಮತ್ತು ಸಭಿಕರನ್ನು ವಂದಿಸುವ ವಸ್ತು ಇರುವ ವಿದುಷಿ ಶಾರದಾಮಣಿ ಶೇಖರ್ ಅವರ ನೃತ್ಯಸಂಯೋಜನೆಯ ಮಿಶ್ರಛಾಪು ತಾಳದ ‘ಅಲರಿಪು’ ಎಂಬ ನೃತ್ತಬಂಧವನ್ನು ಪ್ರದರ್ಶಿಸಿದರು. ಇದರಲ್ಲಿನ ವಿವಿಧ ನೃತ್ತಭಂಗಿಗಳು ಸಭಿಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಅನಂತರ ಭಾವಾಭಿನಯ ಮುಖ್ಯವಾಗಿರುವ, ಕೃಷ್ಣನ ಬಾಲಲೀಲೆಗಳು ಮತ್ತು ದೇವಸ್ವರೂಪಿಯಾದ ಹಸುಗಳ ಗುಂಪಿನ ಕುರಿತಾದ ಕೃಷ್ಣಲೀಲಾ ತರಂಗಿಣಿಯಿಂದ ಆಯ್ದಭಾಗ ‘ಡಿವೈನ್ ಕವ್ ಹರ್ಡ್’ ಎಂಬ ರಚನೆಗೆ ಉತ್ತಮ ಭಾವಾಭಿನಯ ಪ್ರದರ್ಶಿಸಿದರು. ಸುಪ್ರಸಿದ್ಧ ಕಲಾವಿದೆ ರಮಾ ವೈದ್ಯನಾಥನ್ ಇದಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ.

          ಬಳಿಕ ಭರತನಾಟ್ಯದ ತಿರುಳಿನಂತಹ ಮುಖ್ಯಭಾಗವಾದ, ಆಂಗಿಕ ಮತ್ತು ಅಭಿನಯವು ತುಂಬಿರುವ 'ಪದಮ್' ಅನ್ನು ಪ್ರಸ್ತುತಪಡಿಸಿದರು. ‘ದಿಕ್ಕು ತೆರಿಯಾದ ಕಾಟಿಲ್...’ ('ದಿಕ್ಕು ತೋಚದ ಕಾಡಿನಲ್ಲಿ...') ಎಂಬ ತಮಿಳು ರಚನೆಗೆ ಕಲಾವಿದೆ ಅಯನಾ ಅರ್ಥಪೂರ್ಣ ಒಳನೋಟಗಳನ್ನು ನೀಡಿ ಅಭಿನಯಿಸಿದರು. ನಾಯಕಿಯು ಕೃಷ್ಣನನ್ನು ಅರಸುತ್ತ ಕಾಡಿನಲ್ಲಿ ಅಂಡಲೆಯುವ ಕಥಾ ಸನ್ನಿವೇಶಕ್ಕೆ ಮೀನಾಕ್ಷಿ ರಾಮಚಂದ್ರನ್ ನೃತ್ಯ ಸಂಯೋಜನೆ ಮಾಡಿದ್ದು, ವಿದುಷಿ ಅಯನಾ ಪೆರ್ಲ ಪ್ರಬುದ್ಧ ಅಭಿನಯ ನೀಡಿದರು.

             ಭಾವದ ಅಭಿವ್ಯಕ್ತಿಯ ಪ್ರಸ್ತುತಿಗಾಗಿ ಅಯನಾ ಪೆರ್ಲ ಆಯ್ದುಕೊಂಡ ಇನ್ನೊಂದು ರಚನೆ ಪುರಂದರದಾಸರ ‘ಕಡೆಗೋಲ ತಾರೆನ್ನ ಚಿಣ್ಣವೇ..’ ಎಂಬ ದಾಸರ ಪದ. ತಾಯಿ ಯಶೋದೆ ಮತ್ತು ಕೃಷ್ಣನ ಹೃದ್ಯವಾದ ಪ್ರೀತಿ - ಮಮಕಾರ ಮತ್ತು ಕಾರುಣ್ಯದ ಚಿತ್ರಣವನ್ನು ಒಳಗೊಂಡಿರುವ ಈ ಹಾಡಿಗೆ ಕಲಾವಿದೆ ಮನೋಜ್ಞವಾದ ಅಭಿವ್ಯಕ್ತಿ ನೀಡಿದರು. 

              ಕಾರ್ಯಕ್ರಮದ ಕೊನೆಯ ಭಾಗವಾಗಿ ಮಧುವಂತಿ ರಾಗ ಹಾಗೂ ಆದಿ ತಾಳದಲ್ಲಿರುವ ಮತ್ತು ಲಾಲ್’ಗುಡಿ ಜಯರಾಮನ್ ರಚಿಸಿ ರಮಾ ವೈದ್ಯನಾಥನ್ ಕೊರಿಯೋಗ್ರಫಿ ಮಾಡಿರುವ ನೃತ್ಯಸಂಯೋಜನೆಯ ಮಧುವಂತಿ ತಿಲ್ಲಾನವು ಆಕರ್ಷಕವಾಗಿ ಮೂಡಿಬಂತು.

             ಒಟ್ಟಿನಲ್ಲಿ ವಿದುಷಿ ಅಯನಾ ಪೆರ್ಲ ಅವರ ನೃತ್ಯಸಂಧ್ಯಾ ಕಾರ್ಯಕ್ರಮವು ಎಡನೀರಿನ ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ ನೇರಪ್ರಸಾರದ ಮೂಲಕ ಸಾವಿರಾರು ಕಲಾರಸಿಕರನ್ನು ತಟ್ಟುವಲ್ಲಿ ಯಶಸ್ವಿಯಾಯಿತು. ಕಲಾವಿದೆಯ ತಂದೆ ಡಾ. ವಸಂತಕುಮಾರ ಪೆರ್ಲ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

           ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಫಲಮಂತ್ರಾಕ್ಷತೆಯನ್ನಿತ್ತು ಕಲಾವಿದೆಯನ್ನು ಗೌರವಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries