ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು 'ಜೈ ಜವಾನ್ ಜೈ ಕಿಸಾನ್' ಎಂಬ ಆಶಯವನ್ನು ಮುಂದಿಟ್ಟು ಆಚರಿಸಲಾಯಿತು.ಮುಖ್ಯಅತಿಥಿಗಳಾದ ನಿವೃತ್ತ ಕಮಾಂಡರ್ ಶ್ಯಾಮರಾಜ ಇ ವಿ. ಹಾಗೂ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರು ಜಂಟಿಯಾಗಿ ಧ್ವಜಾರೋಹಣಗೈದರು. ಸ್ವಾತಂತ್ರ್ಯೋತ್ಸವದ ಭಾಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕ ಪ್ರೇಮ.ಕೆ ಭಟ್ ವಹಿಸಿದ್ದರು. ನಿವೃತ್ತ ಯೋಧ ಶ್ಯಾಮರಾಜ್ ಮಾತನಾಡಿ, ಯೋದನ ಬದುಕು ದೀಪದ ಬತ್ತಿಯಂತೆ, ತಾನು ಉರಿದರೂ ಬೆಳಕು ನೀಡುತ್ತಾ ಮರೆಯಾಗುವಂಥದ್ದು. ಯುವ ಪೀಳಿಗೆಯಲ್ಲಿ ದೇಶದ ಬಗ್ಗೆ ಕಾಳಜಿ ಮೂಡಬೇಕು. ದೇಶದ ರಕ್ಷಣೆ ಪ್ರತಿಯೊಬ್ಬನ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು. ಜಾತಿ,ಮತ,ಪಂಥ ಮನುಷ್ಯ ಮಾಡಿಕೊಂಡ ಕಂದಕಗಳು ನನ್ನೊಳಗೆ ಹರಿಯುತ್ತಿರುವುದು ಅವೆಲ್ಲದಕ್ಕೂ ಮೀರಿದ ರಕ್ತ ಎನ್ನುತ್ತಾ, ತಮ್ಮ ನಗುವಿನ ಮರೆಯಲ್ಲಿ ಅವಿತಿರುವ ಕರಾಳ ನೆನಪುಗಳನ್ನು ಮಕ್ಕಳ ಮುಂದೆ ತೆರೆದಿಟ್ಟ ಅವರ ಮಾತುಗಳು ನೆರೆದಿದ್ದವರ ಕಣ್ಣಾಲೆಗಳನ್ನು ಆದ್ರ್ರಗೊಳಿಸಿತು.
ಕೃಷಿ ಸಾಹಸಿ, ಭತ್ತತಳಿ ಸಂರಕ್ಷಕ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರು ಮಾತನಾಡಿ, ಸರಳ ಸಾಮಾನ್ಯರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ನೀಡಿರುವ ಮನ್ನಣೆಗೆ ಕೃತಜ್ಞತೆ ವ್ಯಕ್ತಪಡಿಸಿಡಿದರು. ಯುವ ಪೀಳಿಗೆ ಉಣ್ಣುತ್ತಿರುವ ಅನ್ನದ ಬಗ್ಗೆ ತಳೆದಿರುವ ಲಘುಭಾವನೆ ಕೈ ಬಿಡದಿದ್ದಲ್ಲಿ ಮುಂದೆ ತಕ್ಕ ಬೆಲೆ ನೆರಬೇಕಾದೀತು ಎಂದು ಎಚ್ಚರಿಕೆ ನೀಡಿದರು. 'ಜವಾನ್ ಹಾಗೂ ಕಿಸಾನ್' ತೆರೆ ಮರೆಯ ವೀರರು. ಅವರು ನಾಡಿನ, ನಾಗರಿಕರ ಹಿತ ಕಾಯುವ ರೀತಿಯನ್ನು ವಿವರಿಸಿದರು.
ಮುಖ್ಯ ಅತಿಥಿಗಳಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶಾಲಾ ಹಳೆ ವಿದ್ಯಾರ್ಥಿ ಶಿವಶಂಕರ ಕಾನ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ, ಉಪಾಧ್ಯಕ್ಷ ಹಮೀದ್ ಮೈತಾಳ, ಮಾತೃ ಮಂಡಳಿ ಉಪಾಧ್ಯಕ್ಷೆ ನಫೀಸತ್ ಮಿಸ್ರಿಯ, ಶಾಲಾ ರಕ್ಷಣಾಧಿಕಾರಿ ಚಂದ್ರ ಶೇಖರ್ ಶುಭಹಾರೈಸಿದರು. 2023-24 ನೇ ಶೈಕ್ಷಣಿಕ ವರ್ಷದ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಕಾನ. ದಿ.ನಾರಾಯಣ ಭಟ್ಟ-ಗೌರಿ ಅಮ್ಮ ಸ್ಮರಣಾರ್ಥ ಕಾನ ಶಿವಶಂಕರ ಭಟ್, ತೊಟ್ಟೆತ್ತೋಡಿ ನಾರಾಯಣ ಭಟ್- ಕೇಶವ ಭಟ್ ಸ್ಮರಣಾರ್ಥ ಪ್ರೇಮ.ಕೆ ಭಟ್ ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರವನ್ನು ನೀಡಿದರು. ಕಳೆದ ಶೈಕ್ಷಣಿಕ ವರ್ಷದ ಕಣ್ಣೂರು ವಿಶ್ವ ವಿದ್ಯಾನಿಲಯ ಕನ್ನಡ ಪದವಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಶಾಲಾ ಹಳೆ ವಿದ್ಯಾರ್ಥಿ ಆದಿಶ್ರೀ ಎಸ್.ಎನ್ ಅವರನ್ನು ಅಭಿನಂದಿಸಲಾಯಿತು.ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮೃದುಲ ಸ್ವಾಗತಿಸಿದರು.ಸಮಾಜ ವಿಜ್ಞಾನ ಶಿಕ್ಷಕ ಕಿರಣ್ ಕುಮಾರ್ ಕೆ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಂಶುಪಾಲ ರಮೇಶ ಕೆ.ಎನ್ ವಂದಿಸಿದರು.