ಮುಂಬೈ: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಕೊಲೆ, ಅತ್ಯಾಚಾರ ಪ್ರಕರಣದ ವಿರುದ್ಧ ಬಾಲಿವುಡ್ ತಾರೆಯರು ಧ್ವನಿಯೆತ್ತಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು ನಿರ್ಭಯಾ ಪ್ರಕರಣ ನೆನಪಿಸಿಕೊಂಡಿರುವ ಕರೀನಾ ಕಪೂರ್, '12 ವರ್ಷಗಳ ನಂತರವೂ ಮತ್ತೆ ಅದೇ ಕಥೆ, ಅದೇ ಪ್ರತಿಭಟನೆ, ಆದರೆ ಇನ್ನೂ ನಾವು ಬದಲಾವಣೆಗಾಗಿ ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ'.
ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿರುವ ಆಲಿಯಾ ಭಟ್, 'ಮತ್ತೊಂದು ಭೀಕರ ಅತ್ಯಾಚಾರ, ಹೆಣ್ಣಿಗೆ ಎಲ್ಲಿಯೂ ಸುರಕ್ಷತೆಯಿಲ್ಲ ಎಂದು ತೋರಿಸಿಕೊಡುವ ಮತ್ತೊಂದು ದಿನ, ನಿರ್ಭಯಾ ದುರಂತ ಸಂಭವಿಸಿ ಒಂದು ದಶಕ ಕಳೆದಿದೆ, ಆದರೆ ಇನ್ನೂ ಏನೂ ಬದಲಾಗಿಲ್ಲ ಎಂಬುದನ್ನು ನಮಗೆ ನೆನಪಿಸಲು ಮತ್ತೊಂದು ಭಯಾನಕ ದೌರ್ಜನ್ಯ' ಎಂದಿದ್ದಾರೆ. ಜತೆಗೆ ದೇಶದಲ್ಲಿನ ಅಪರಾಧ ಪ್ರಕರಣಗಳ ಕುರಿತು ಎನ್‌ಸಿಆರ್‌ಬಿ ಹಂಚಿಕೊಂಡಿರುವ ವರದಿಯನ್ನು ಶೇರ್ ಮಾಡಿದ್ದಾರೆ.
ನಟಿ ಪರಿಣಿತಿ ಚೋಪ್ರಾ ಕೂಡ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡು, 'ನಿಮಗೇ ಓದಲು ಕಷ್ಟವಾಗುತ್ತಿದೆ ಎಂದರೆ, ಆಕೆಗೆ ಯಾವ ಅನುಭವವಾಗಿರಬಹುದು ಎನ್ನುವುದನ್ನು ಯೋಚಿಸಿ, ಕೃತ್ಯ ಎಸಗಿದಾತನನ್ನು ಗಲ್ಲಿಗೇರಿಸಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ವಿಜಯ್ ವರ್ಮಾ, 'ಕೊನೆ ಪಕ್ಷ ನಮ್ಮನ್ನು ಕಾಯುವವರನ್ನಾದರೂ ರಕ್ಷಿಸಿ' ಎಂದು ಬರೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡ ಆಯುಷ್‌ಮಾನ್ ಖುರಾನ್, ಇಂದಿನ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ.