ಢಾಕಾ: 'ಬಾಂಗ್ಲಾದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ' ಎಂದು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಆಯೋಜಿಸಿದ್ದ 'ಥರ್ಡ್ ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮ್ಮಿಟ್' ವರ್ಚುವಲ್ ಸಭೆಯಲ್ಲಿ ಮಾತಾಡಿದ ಯೂನಸ್, 'ಬಾಂಗ್ಲಾದ ವೀರ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಸಾಮೂಹಿಕ ದಂಗೆಯ ಮೂಲಕ ಆಗಸ್ಟ್ 5ರಂದು ಬಾಂಗ್ಲಾದೇಶ ಎರಡನೇ ಕ್ರಾಂತಿಗೆ ಸಾಕ್ಷಿಯಾಗಿರುವುದು ನಿಮಗೆಲ್ಲ ತಿಳಿದಿದೆ' ಎಂದರು.
'ನಮ್ಮ ಸರ್ಕಾರವು ಎಲ್ಲರನ್ನೊಳಗೊಂಡ ಬಹುತ್ವ ಪ್ರಜಾಪ್ರಭುತ್ವವನ್ನು ಖಚಿತಪಡಿಸಲು ಮತ್ತು ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ವಾತಾವರಣವನ್ನು ಸೃಷ್ಟಿಸಲು ಬದ್ಧವಾಗಿದೆ. ನಮ್ಮ ಚುನಾವಣಾ ವ್ಯವಸ್ಥೆ, ನ್ಯಾಯಾಂಗ, ಸ್ಥಳೀಯ ಸಂಸ್ಥೆಗಳು, ಮಾಧ್ಯಮ, ಆರ್ಥಿಕತೆ ಮತ್ತು ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳುವುದು ನಮ್ಮ ಮೊದಲ ಕರ್ತವ್ಯವಾಗಿದೆ ' ಎಂದು ಹೇಳಿದರು.
'ಶೀಘ್ರದಲ್ಲೇ ಢಾಕಾಕ್ಕೆ ಭೇಟಿ ನೀಡುವಂತೆ ನಾವು ನಿಮಗೆ(ಮೋದಿ) ಆಹ್ವಾನ ನೀಡುತ್ತೇವೆ. ಢಾಕಾದ ತುಂಬಾ ಗೀಚುಬರಹಗಳನ್ನು ನೀವು ಕಾಣಬಹುದು. ಢಾಕಾವು ವಿಶ್ವದ ಗೀಚುಬರಹ ರಾಜಧಾನಿಯಾಗಿ ಮಾರ್ಪಟ್ಟಿದೆ. 400 ವರ್ಷಕ್ಕಿಂತಲೂ ಹಳೆಯದಾದ ನಗರದ ಗೋಡೆಗಳ ಮೇಲೆ 12ರಿಂದ 13 ವರ್ಷದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಸ್ನೇಹಿ ಬಾಂಗ್ಲಾದೇಶದ ಚಿತ್ರಗಳನ್ನು ಬರೆದಿದ್ದಾರೆ' ಎಂದು ಪ್ರಧಾನಿ ಮೋದಿ ಅವರಿಗೆ ಹೇಳಿದರು.
'ಬಾಂಗ್ಲಾದ ಜನಸಂಖ್ಯೆಯಲ್ಲಿ ಯುವ ಜನತೆಯ ಪಾಲು ಹೆಚ್ಚಿದ್ದು, ಜನಸಂಖ್ಯೆಯ ಮೂರನೇ ಎರಡು ಭಾಗವು ಯುವ ಜನರಿದ್ದಾರೆ. ಅವರು ಸಮಾಜದ ಕೇಂದ್ರ ಬಿಂದುವಾಗಿದ್ದಾರೆ. ನಮ್ಮ ಕಾರ್ಯತಂತ್ರ ಹೃದಯಭಾಗದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಸ್ಥಾನ ನೀಡಬೇಕಿದೆ. ಹೊಸ ಜಗತ್ತನ್ನೇ ಸೃಷ್ಟಿಸಲು ಅವರು ಬದ್ಧರಾಗಿದ್ದಾರೆ' ಎಂದು ತಿಳಿಸಿದರು.
'1952ರಲ್ಲಿ ಮಾತೃಭಾಷೆಗಾಗಿ ಬಾಂಗ್ಲಾ ವಿದ್ಯಾರ್ಥಿಗಳು ಜೀವ ತೆತ್ತಿದ್ದರು. ಇದು ಮಾತೃಭಾಷೆಯಲ್ಲಿ ಮಾತನಾಡುವ ಹಕ್ಕಿನ ಬಗ್ಗೆ ಇಡೀ ಜಗತ್ತಿನಾದ್ಯಂತ ಹೋರಾಟಗಳಿಗೆ ಪ್ರೇರೇಪಿಸಿತ್ತು. ಇದಾದ ಏಳು ದಶಕದ ನಂತರ ಎರಡನೇ ಕ್ರಾಂತಿಗೆ ನಮ್ಮ ವಿದ್ಯಾರ್ಥಿಗಳು ಸಾಕ್ಷಿಯಾದರು. ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಘನತೆ, ಸಮಾನತೆ ಮತ್ತು ಸಮಾನ ಹಂಚಿಕೆ ಕುರಿತು ಅವರು ಧ್ವನಿ ಎತ್ತಿದರು' ಎಂದು ವಿದ್ಯಾರ್ಥಿ ಹೋರಾಟವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.
'ಅವರ ಕ್ರಾಂತಿಯಲ್ಲಿ ಭಾಗವಹಿಸಿದ ಮತ್ತು ಅವರ ಕನಸು ನನಸು ಮಾಡಲು ಸಹಾಯ ಮಾಡಿದ ಹಿರಿಯ 'ಯುವಕ' ಎಂಬ ಗೌರವಕ್ಕೆ ನಾನು ಪಾತ್ರನಾಗಿದ್ದೇನೆ. ನಿಮ್ಮೆಲ್ಲರಿಂದಲೂ ಅವರಿಗೆ ಸಹಕಾರ ದೊರೆಯಬೇಕಿದೆ' ಎಂದು ಹೇಳಿದರು.
ವಿವಾದಾತ್ಮಕ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ದೇಶದಲ್ಲಿ ಸೃಷ್ಟಿಯಾದ ಅರಾಜಕತೆಗೆ ನಲುಗಿದ ಶೇಖ್ ಹಸೀನಾ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಆಗಸ್ಟ್ 5 ರಂದು ಭಾರತಕ್ಕೆ ಪಲಾಯನ ಮಾಡಿದ್ದರು. ಇದರ ಬೆನ್ನಲ್ಲೇ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ.