HEALTH TIPS

ವಯನಾಡು ಭೂಕುಸಿತ: 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಲು ಕೇಂದ್ರ ನಕಾರ

             ಮೇಪ್ಪಾಡಿ: ವಯನಾಡು ಜಿಲ್ಲೆಯಾದ್ಯಂತ ಸಂಭವಿಸಿರುವ ಸರಣಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 300ರ ಗಡಿ ದಾಟಿದ್ದರೂ, ದುರಂತವನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಇದರ ಬೆನ್ನಲ್ಲೇ, ಮೇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು 'ವಿಪತ್ತು ಪೀಡಿತ' ಪ್ರದೇಶ ಎಂದು ಘೋಷಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

          'ಈ ದುರಂತವನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವಂತೆ ಒತ್ತಾಯಿಸಿ ನಾವು (ಸಚಿವ ಸಂಪುಟ) ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆದರೆ, ಅವರು ಸಿದ್ಧರಿಲ್ಲ. ಕಾನೂನಾತ್ಮಕ ಸಮಸ್ಯೆಗಳಿವೆ ಎಂದು ಹೇಳುತ್ತಾರೆ. ನಾವು ಇದನ್ನು 'ರಾಜ್ಯ ವಿಪತ್ತು' ಎಂದು ಘೋಷಿಸಲಿದ್ದೇವೆ' ಎಂದು ಕೇರಳ ಕಂದಾಯ ಸಚಿವ ಕೆ.ರಾಜನ್‌ ಪ್ರಜಾವಾಣಿಗೆ ತಿಳಿಸಿದ್ದಾರೆ.


          ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷಗಳು ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಹೆಚ್ಚುವರಿ ಅನುದಾನ ನೀಡಬೇಕು ಎಂದು ಒತ್ತಾಯಿಸಿವೆ. ಇದರ ನಡುವೆಯೇ ಹೊರಡಿಸಲಾಗಿರುವ ಆದೇಶವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ರಾಜಕೀಯ ಕಲಹಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.

                  ಜಿಲ್ಲೆಯ ವೈಥಿರಿ ತಾಲ್ಲೂಕಿನ ಮೇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಪಾಡಿ, ವೆಲ್ಲರ್‌ಮಲ, ತ್ರಿಕ್ಕೈಪೆಟ್ಟ ಗ್ರಾಮಗಳು 2024ರ ಜುಲೈ 30ರಿಂದ ವಿಪತ್ತಿಗೆ ತುತ್ತಾಗಿವೆ. ಭೂಕುಸಿತ ಹಾಗೂ ಅದರ ಪರಿಣಾಮವಾಗಿ ಜನರ ಜೀವನ, ಜೀವನೋಪಾಯ, ಆಸ್ತಿ ನಾಶವಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

           ವಯನಾಡು ಭೂಕುಸಿತ ಕುರಿತು ಕಲಾವಿದ ಸುದರ್ಶನ್ ಪಟ್ನಾಯಕ್ ರಚಿಸಿರುವ ಮರಳು ಕಲಾಕೃತಿ

                ಆದೇಶದ ಪ್ರಾಮುಖ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಪ್ರಕಟಣೆಯ ಮೂಲಕ ದುರಂತವನ್ನು ರಾಜ್ಯ ವಿಪತ್ತು ಎಂದು ಗುರುತಿಸಲಾಗುತ್ತದೆ. ಹೆಚ್ಚುವರಿ ನೆರವು ಒದಗಿಸಲಾಗುತ್ತದೆ ಎಂದು ರಾಜನ್‌ ಹೇಳಿದ್ದಾರೆ. 'ಯಾವುದೇ ವ್ಯಕ್ತಿ ಭೂಕುಸಿತದಿಂದ ಮನೆ ಕಳೆದುಕೊಂಡಿದ್ದರೆ ಅವರಿಗೆ ₹ 1,01,600 ನೀಡುತ್ತೇವೆ. ದುರಂತವನ್ನು ರಾಜ್ಯ ವಿಪತ್ತು ಎಂದು ಘೋಷಿಸಿದರೆ, ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯಿಂದ ಹೆಚ್ಚುವರಿ ನೆರವು ನೀಡಲು ಸಾಧ್ಯವಾಗುತ್ತದೆ' ಎಂದು ವಿವರಿಸಿದ್ದಾರೆ.

'ರಾಷ್ಟ್ರೀಯ ವಿಪತ್ತು' ಎಂದು ಘೋಷಣೆಯಾದರೆ, ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಡಲು, ಪುನರ್ವಸತಿ ಕಲ್ಪಿಸಲು ಹೆಚ್ಚಿನ ನೆರವು ದೊರೆಯುತ್ತದೆ ಎಂದೂ ತಿಳಿಸಿದ್ದಾರೆ.

             'ರಾಷ್ಟ್ರೀಯ ವಿಪತ್ತು' ಘೋಷಣೆಯಿಂದ ರಾಷ್ಟ್ರೀಯ ಮಟ್ಟದಲ್ಲಿ ಪರಿಹಾರ ನಿಧಿ ಸ್ಥಾಪಿಸಲು ಸಾಧ್ಯವಾಗುತ್ತದೆ. ಅದಕ್ಕೆ ಕೇಂದ್ರ ಸರ್ಕಾರದಿಂದ ಶೇ 75 ರಷ್ಟು ಮತ್ತು ಉಳಿದದ್ದು ರಾಜ್ಯ ಸರ್ಕಾರದ ಮೂಲದಿಂದ ನಿಧಿ ಸಂಗ್ರಹವಾಗುತ್ತದೆ. ಆದರೆ, ಇಂತಹ ದುರಂತಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಇರುವ ಮಾನದಂಡಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಆದಾಗ್ಯೂ, ರಾಜ್ಯ ಸರ್ಕಾರವು ಸಂತ್ರಸ್ತರ ರಕ್ಷಣೆ ಮತ್ತು ಮೃತರ ಶವಗಳನ್ನು ಹೊರ ತೆಗೆಯುವುದಕ್ಕೆ ಆದ್ಯತೆ ನೀಡುತ್ತಿದೆ. ನಂತರ ಪುನರ್ವಸತಿ ಬಗ್ಗೆ ಯೋಚಿಸಲಾಗುವುದು ಎಂದು ರಾಜನ್‌ ಹೇಳಿದ್ದಾರೆ.

'ಸದ್ಯದ ಆದೇಶದ ಮೂಲಕ ನಾವು ಪುನರ್ವಸತಿ ಕಾರ್ಯದಲ್ಲಿ ಕೇರಳ ಮಾದರಿಯನ್ನು ರೂಪಿಸಲಿದ್ದೇವೆ. ಭೂಕುಸಿತದಿಂದ ಆದ ನಷ್ಟದ ಅಂತಿಮ ಅಂಕಿ-ಅಂಶದೊಂದಿಗೆ ಕೇಂದ್ರ ಸರ್ಕಾರದ ಮುಂದೆ ಹೋಗುತ್ತೇವೆ. ಇದರಲ್ಲಿ ರಾಜಕೀಯ ಹೋರಾಟದ ವಿಚಾರವೇ ಇಲ್ಲ. ಪುನರ್ವಸತಿ ಕಲ್ಪಿಸುವುದರ ಮೇಲಷ್ಟೇ ನಮ್ಮ ಗಮನ ಕೇಂದ್ರೀಕರಿಸಲಾಗುವುದು' ಎಂದು ಸ್ಪಷ್ಟಪಡಿಸಿದ್ದಾರೆ.

ಮೂಲಗಳ ಪ್ರಕಾರ, ಕೇರಳ ಸರ್ಕಾರದ ಪ್ರಕಟಣೆಯು ರಾಜ್ಯದ ಬೇಡಿಕೆಯ ಬಗ್ಗೆ ಕೇಂದ್ರದ ಗಮನ ಸೆಳೆಯಲಿದೆ ಎನ್ನಲಾಗಿದೆ. 'ಈ ದುರಂತವು ರಾಷ್ಟ್ರೀಯ ವಿಪತ್ತು ಎಂದು ಘೋಷಣೆಯಾದರೆ ರಾಜ್ಯಕ್ಕೆ ತಾನಾಗಿಯೇ ರಾಷ್ಟ್ರ ಮಟ್ಟದಲ್ಲಿ ನೆರವು ಸಿಗಲಿದೆ. ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಗಮನಹರಿಸದೇ ಇದ್ದರೆ, ಎರಡೂ ಸರ್ಕಾರಗಳ ನಡುವೆ ಕಲಹ ಮುಂದುವರಿಯುವ ಸಾಧ್ಯತೆ ಇದೆ' ಎಂದೂ ಮೂಲಗಳು ತಿಳಿಸಿವೆ.


ಭೂಕುಸಿತ ಪ್ರದೇಶದಿಂದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ರಕ್ಷಣಾ ಪಡೆ ಸ್ಥಳಾಂತರಿಸುತ್ತಿರುವ ದೃಶ್ಯ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries