ಕಾಸರಗೋಡು: ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ನ್ಯಾಯಾಲಯದಲ್ಲೂ ಕಳವಿಗೆ ಯತ್ನಿಸಲಾಗಿದೆ. ಮಳೆ ಬಿರುಸುಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಮನೆ, ದೇವಸ್ಥಾನ ಸೇರಿದಂತೆ ವಿವಿಧೆಡೆ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ, ಕಾಸರಗೋಡು ಜಿಲ್ಲಾ ನ್ಯಾಯಾಲಯದಿಂದಲೂ ಭಾನುವಾರ ರಾತ್ರಿ ಕಳವಿಗೆ ಯತ್ನಿಸಲಾಗಿದೆ. ನ್ಯಾಯಾಲಯದ ಎದುರಿನ ಬೀಗ ಒಡೆದು ಆವರಣದೊಳಗೆ ನುಗ್ಗುತ್ತಿದ್ದಂತೆ ಕಾವಲುಗಾರ ಎಚ್ಚೆತ್ತಾಗ ಓಡಿ ಪರಾರಿಯಾಗಿದ್ದಾನೆ. ಸಿಸಿ ಕ್ಯಾಮರಾದಲ್ಲಿ ಕಳ್ಳನ ಚಲನವಲನದ ದೃಶ್ಯ ಸೆರೆಯಾಗಿದೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಲ ಸನಿಹದ ಮಣಿಯಂಪಾರೆಯ ಬೀಫಾತಿಮಾ ಸುನೈನಾ ಎಂಬವರ ಮನೆ ಬಾಗಿಲು ಒಡೆದು ನುಗ್ಗಿದ ಕಳ್ಳರು ಒಂಣಬತ್ತು ಚೀಲ ಗೋಟಡಕೆ, ಟಿವಿ, ಟ್ಯಾಬ್, ವೈಫೈ ಕ್ಯಾಮರಾ, ಮೋಡೆಂ ಸೆರಿದಂತೆ ಎರಡು ಲಕ್ಷ ರಊ. ಮೌಲ್ಯದ ಸಾಮಗ್ರಿ ದೋಚಿದ್ದಾರೆ. ಬೀಫಾತಿಮ್ಮ ಕುಟುಂಬ ಸಂಬಂಧಿಕರಲ್ಲಿಗೆ ತೆರಳಿದ್ದು, ವಾಪಸಾದಾಗ ಕಳವು ಬೆಳಕಿಗೆ ಬಂದಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬೋವಿಕ್ಕಾನದಲ್ಲಿ ಕಳವು:
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿಕ್ಕಾನ ಸನಿಹದ ಮಾಸ್ತಿಕುಂಡು ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ನೌಫಾಲ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಬೆಳ್ಳಿ ಆಭರಣ, 10ಸಾವಿರ ರೂ. ನಗದು, ರೆಡೋ ಸೇರಿದಂತೆ ವಿವಿಧ ವಾಚುಗಳನ್ನು ಕಳವುಗೈದಿದ್ದಾರೆ. ನೌಫಾಲ್ ಅವರು ವಿದೇಶದಲ್ಲಿದ್ದು, ಇವರ ಪತ್ನಿ ಮತ್ತು ಮಕ್ಕಳು ತಳಿಪರಂಬದ ಸಂಬಂಧಿಕರ ಮನೆಗೆ ತೆರಳಿದ್ದಾಗ ಕಳವು ನಡೆದಿದೆ. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಹೊಸದುರ್ಗದಲ್ಲಿ ಕಳವು:
ಹೊಸದುರ್ಗದ ಬಿಎಸ್ಸೆನ್ನೆಲ್ ಟವರ್‍ಗೆ ಅಳವಡಿಸಲು ಟವರ್‍ನೊಳಗೆ ದಾಸ್ತಾನಿರಿಸಿದ್ದ 15ಲಕ್ಷ ರೂ. ಮೌಲ್ಯದ 4-ಜಿ ಉಪಕರಣಗಳನ್ನು ಕಳವುಗೈಯಲಾಗಿದೆ. 4-ಜಿ ಸಂಪರ್ಕಕ್ಕಾಗಿ ಅಲವಡಿಸಲಿರುವ ಉಪಕರಣ ಇದಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ನೀಲೇಶ್ವರ ಕರುವಚ್ಚೇರಿಯ ಬಿಎಸ್ಸೆನ್ನೆಲ್ ಟವರ್ ವಠಾರದಿಂದ ಕೆಲವು ಸಾಮಗ್ರಿ ಕಳವಾಗಿತ್ತು. ನೀಲೇಶ್ವರ ಚಾಯಂಗೋಡ್ ನಿವಾಸಿ ಪವಿತ್ರನ್ ಎಂಬವರ ಅಂಗಡಿಯಿಂದ ಸುಮಾರು 2ಲಕ್ಷ ರೂ. ಸಾಮಗ್ರಿ ಕಳವುಗೈಯಲಾಗಿದ್ದು, ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.