ನವದೆಹಲಿ: ಒಬ್ಬ ವ್ಯಕ್ತಿ ವಾಹನವನ್ನು ಹಿಂದಿಕ್ಕಲು ನಡೆಸುವ ಪ್ರಯತ್ನವನ್ನು (ಓವರ್‌ಟೇಕ್) ಅಜಾಗರೂಕತೆ ಅಥವಾ ನಿರ್ಲಕ್ಷ್ಯದ ಕೃತ್ಯವೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಅಪಘಾತ ಪ್ರಕರಣವೊಂದರ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಕೋರಿ ಪ್ರೇಮ್ ಲಾಲ್ ಆನಂದ್ ಎಂಬವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು. ಮೋಟರು ಅಪಘಾತ ಪರಿಹಾರ ನ್ಯಾಯಮಂಡಳಿಯು (ಎಂಎಸಿಟಿ) ಆನಂದ್ ಅವರಿಗೆ ನೀಡಿದ್ದ ₹1.01 ಲಕ್ಷ ಪರಿಹಾರ ಮೊತ್ತವನ್ನು ಸುಪ್ರೀಂ ಕೋರ್ಟ್, ₹11.25 ಲಕ್ಷಕ್ಕೆ ಪರಿಷ್ಕರಿಸಿ ಆದೇಶಿಸಿತು.
'ಅಪೀಲುದಾರ ಪ್ರೇಮ್ ಲಾಲ್ ಆನಂದ್ ಅವರು ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಓವರ್‌ಟೇಕ್ ಎಂಬುದು ರಸ್ತೆಯಲ್ಲಿ ಪ್ರತಿದಿನ ಸಾಮಾನ್ಯವಾಗಿ ಕಂಡುಬರುವ ಪ್ರಕ್ರಿಯೆಯಾಗಿದೆ. ಅಪಘಾತಕ್ಕೆ ಕಾರಣವಾದ ವಾಹನವನ್ನು ಅಜಾಗರೂಕತೆಯಿಂದ ಚಲಾಯಿಸಲಾಗುತ್ತಿತ್ತು ಎಂಬುದು ಸಾಬೀತಾಗಿದೆ. ಆದ್ದರಿಂದ ಅಪೀಲುದಾರ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಿದ್ದರು ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಪೀಠವು ಹೇಳಿತು.
ಆನಂದ್ ಅವರು ದ್ವಿಚಕ್ರವಾಹನದಲ್ಲಿ ಪತ್ನಿ ಜತೆ ನೊಯಿಡಾಕ್ಕೆ ಹೋಗುತ್ತಿದ್ದಾಗ ಮೆಹ್ರೌಲಿ ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ನಿಧಾನವಾಗಿ ಸಾಗುತ್ತಿದ್ದ ಟ್ರಾಕ್ಟರ್‌ವೊಂದನ್ನು ಹಿಂದಿಕ್ಕಲು ಮುಂದಾದಾಗ ಆನಂದ್ ಅವರ ದ್ವಿಚಕ್ರ ವಾಹನಕ್ಕೆ ಎದುರಿನಿಂದ ವೇಗವಾಗಿ ಬಂದ ಟ್ರಾಕ್ಟರ್ ಡಿಕ್ಕಿ ಹೊಡೆದಿತ್ತು. ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಆನಂದ್ ಗಂಭೀರವಾಗಿ ಗಾಯಗೊಂಡಿದ್ದರು.
₹12 ಲಕ್ಷ ಪರಿಹಾರ ನೀಡಬೇಕೆಂದು ಕೋರಿ ಅವರು ಎಂಎಸಿಟಿ ಮೊರೆ ಹೋಗಿದ್ದರು. ಆದರೆ ಅಪಘಾತಕ್ಕೆ ಆನಂದ್ ಅವರ ನಿರ್ಲಕ್ಷ್ಯವೂ ಕಾರಣ ಎಂದಿದ್ದ ಎಂಎಸಿಟಿ ಕಡಿಮೆ ಪರಿಹಾರ ಘೋಷಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.