HEALTH TIPS

ಕೆಲವು ರಾಜ್ಯಪಾಲರು ಮಾಡಬಾರದ್ದನ್ನು ಮಾಡುತ್ತಿದ್ದಾರೆ, ಮಾಡಬೇಕಾಗಿದ್ದನ್ನು ಮಾಡುತ್ತಿಲ್ಲ: ನ್ಯಾ. ಬಿ.ವಿ. ನಾಗರತ್ನ

        ಬೆಂಗಳೂರು: ಭಾರತದಲ್ಲಿ ಕೆಲವು ರಾಜ್ಯಪಾಲರು ತಮ್ಮದಲ್ಲದ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಎಲ್ಲಿ ಕ್ರಿಯಾಶೀಲರಾಗಿರಬೇಕೋ ಅಲ್ಲಿ ನಿಷ್ಕ್ರಿಯರಾಗಿರುತ್ತಾರೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆ ನ್ಯಾ.ಬಿ.ವಿ.ನಾಗರತ್ನ ಅವರು, ರಾಜ್ಯಪಾಲರ ವಿರುದ್ಧ ಪ್ರಕರಣಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು ರಾಜ್ಯಪಾಲರ ಸಾಂವಿಧಾನಿಕ ಸ್ಥಾನದ ಕುರಿತು 'ವಿಷಾದಕರ ಕಥೆ'ಯಾಗಿದೆ ಎಂದು ಹೇಳಿದ್ದಾರೆ.

        ಕೇರಳ ಮತ್ತು ತಮಿಳುನಾಡುಗಳಂತಹ ರಾಜ್ಯಗಳು ಮಸೂದೆಗಳಿಗೆ ಸಮ್ಮತಿಯನ್ನು ತಡೆಹಿಡಿದಿರುವ ತಮ್ಮ ರಾಜ್ಯಪಾಲರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿರುವ ಮತ್ತು ಪ್ರತ್ಯೇಕ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ವಿಧಿ ೩೬೧ರಡಿ ರಾಜ್ಯಪಾಲರಿಗೆ ಕ್ರಿಮಿನಲ್ ಕಾನೂನುಕ್ರಮಗಳಿಂದ ವಿನಾಯಿತಿಯ ಪ್ರಶ್ನೆಯನ್ನು ಪರಿಶೀಲಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ನ್ಯಾ.ನಾಗರತ್ನ ಅವರ ಈ ಹೇಳಿಕೆ ಹೊರಬಿದ್ದಿದೆ.

          ಶನಿವಾರ ಬೆಂಗಳೂರಿನಲ್ಲಿ ಎನ್‌ಎಲ್‌ಎಸ್‌ಐಯು ಪಿಎಸಿಟಿ ಸಮ್ಮೇಳನದಲ್ಲಿ 'ಹೋಮ್ ಇನ್ ದಿ ನೇಷನ್:ಇಂಡಿಯನ್ ವಿಮೆನ್ಸ್ ಕಾನ್‌ಸ್ಟಿಟ್ಯೂಷನಲ್ ಇಮ್ಯಾಜಿನರೀಸ್' ಕುರಿತು ಸಮಾರೋಪ ಭಾಷಣವನ್ನು ಮಾಡಿದ ನ್ಯಾ.ನಾಗರತ್ನಾ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

'ರಾಜ್ಯಪಾಲರ ತಟಸ್ಥತೆ 'ವಿಷಯ ಕುರಿತು ನ್ಯಾಯವಾದಿ ಮತ್ತು ಸಾಮಾಜಿಕ ಕಾಯಕರ್ತೆ ದುರ್ಗಾಬಾಯಿ ದೇಶಮುಖ ಅವರನ್ನು ಉಲ್ಲೇಖಿಸಿದ ನ್ಯಾ.ನಾಗರತ್ನಾ,ರಾಜ್ಯಪಾಲರಿಂದ ನಿರ್ದಿಷ್ಟ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸಲಾಗಿರುತ್ತದೆ. ನಾವು ನಮ್ಮ ಸಂವಿಧಾನದಲ್ಲಿ ರಾಜ್ಯಪಾಲರನ್ನು ಪ್ರಸ್ತಾವಿಸಲು ಬಯಸುತ್ತೇವೆ, ಏಕೆಂದರೆ ರಾಜ್ಯಪಾಲರು ನಿಜವಾಗಿಯೂ ತಮ್ಮ ಕರ್ತವ್ಯಗಳ ಬಗ್ಗೆ ಜಾಗ್ರತರಾಗಿದ್ದರೆ ಮತ್ತು ಅವರು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅಲ್ಲಿ ಸೌಹಾರ್ದದ ಅಂಶವಿರುತ್ತದೆ ಮತ್ತು ಸಂಘರ್ಷ ನಿರತ ಜನರ ಗುಂಪುಗಳ ನಡುವೆ ಒಂದು ರೀತಿಯ ತಿಳುವಳಿಕೆ ಮತ್ತು ಸಾಮರಸ್ಯವನ್ನು ಮೂಡಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಈ ಉದ್ದೇಶಕ್ಕಾಗಿ ಮಾತ್ರ ಇದನ್ನು ಪ್ರಸ್ತಾವಿಸಲಾಗಿದೆ. ರಾಜ್ಯಪಾಲರನ್ನು ಪಕ್ಷ ರಾಜಕೀಯ ಮತ್ತು ಬಣಗಳಿಂದ ದೂರವಿರಬೇಕು ಮತ್ತು ಪಕ್ಷದ ವ್ಯವಹಾರಗಳಲ್ಲಿ ಒಳಗೊಂಡಿರಬಾರದು ಎನ್ನುವುದು ಆಡಳಿತದ ಪರಿಕಲ್ಪನೆಯಾಗಿದೆ ಎಂದು ಹೇಳಿದರು.

            ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮತ್ತು ರಾಜ್ಯದಲ್ಲಿಯ ಕಾಂಗ್ರೆಸ್ ಸರಕಾರದ ನಡುವೆ ನಡೆಯುತ್ತಿರುವ ಜಟಾಪಟಿಯ ಹಿನ್ನೆಲೆಯಲ್ಲಿಯೂ ನ್ಯಾ.ನಾಗರತ್ನಾ ಅವರ ಈ ಹೇಳಿಕೆ ಹೊರಬಿದ್ದಿದೆ.

          ಗೆಹ್ಲೋಟ್ ಕಳೆದ ವಾರ ಸಿದ್ದರಾಮಯ್ಯನವರಿಗೆ ಶೋ-ಕಾಸ್ ನೋಟಿಸ್ ಹೊರಡಿಸಿದ್ದರು. ಗುರುವಾರ ಕರ್ನಾಟಕ ಸರಕಾರವು ನೋಟಿಸ್‌ನ್ನು ಹಿಂದೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡಿರುವ ನಿರ್ಣಯವನ್ನು ಅಂಗೀಕರಿಸಿದೆ.

            ಭಾರತೀಯ ಸಾಂವಿಧಾನಿಕತೆಯನ್ನು ಇನ್ನಷ್ಟು ಬಲಗೊಳಿಸಲು ದೇಶವು ಒಕ್ಕೂಟವಾದ,ಭ್ರಾತೃತ್ವ,ಮೂಲಭೂತ ಹಕ್ಕುಗಳು ಮತ್ತು ತಾತ್ವಿಕ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಹೇಳಿದ ನ್ಯಾ.ನಾಗರತ್ನಾ ಕೇಂದ್ರ ಮತ್ತು ಪ್ರತಿಪಕ್ಷದ ಆಡಳಿತಗಳ ರಾಜ್ಯಗಳ ನಡುವೆ ಹೆಚ್ಚುತ್ತಿರುವ ಸಂಘರ್ಷಗಳ ಹಿನ್ನೆಲೆಯಲ್ಲಿ,ರಾಜ್ಯಗಳನ್ನು 'ಅಸಮರ್ಥ ಅಥವಾ ಅಧೀನ'ಎಂದು ಭಾವಿಸಬಾರದು ಮತ್ತು ಸಾಂವಿಧಾನಿಕ ರಾಜನೀತಿಯು ಮಂತ್ರವಾಗಿರಬೇಕು ಎಂದು ಹೇಳಿದರು.

ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದೊಂದಿಗೆ ಸಮಾಜವು ನಿಜವಾದ 'ರಚನಾತ್ಮಕ ಪೌರತ್ವ'ವನ್ನು ಪಡೆದುಕೊಳ್ಳುತ್ತದೆ ಎಂದ ಅವರು,ಮಹಿಳೆಯರ ಹಣಕಾಸು ಸ್ವಾತಂತ್ರ್ಯವು ಸಾಮಾಜಿಕ ಸುಧಾರಣೆಗೆ ಮತ್ತು ಮಹಿಳೆಯರ ಆರ್ಥಿಕ ಶೋಷಣೆಯ ವಿರುದ್ಧ ಅತ್ಯಂತ ಸುರಕ್ಷಿತ ಸಾಧನವಾಗಿದೆ. ಔಪಚಾರಿಕ ಕಾರ್ಯಪಡೆಯಲ್ಲಿ ಭಾಗವಹಿಸುವ,ರಚನಾತ್ಮಕ ಕೊಡುಗೆ ನೀಡುವ ಮತ್ತು ಬೆಳೆಯುವ ಮಹಿಳೆಯ ಮಹತ್ವಾಕಾಂಕ್ಷೆಯು ಹೆಚ್ಚಾಗಿ ಕೌಟುಂಬಿಕ ಕರ್ತವ್ಯಗಳ ಹಂಚಿಕೆಯ ಕೊರತೆ ಮತ್ತು ಮಕ್ಕಳನ್ನು ಬೆಳೆಸುವ ಅಥವಾ ಮನೆಗೆಲಸಗಳನ್ನು ನಿಭಾಯಿಸುವ ಜವಾಬ್ದಾರಿಗಳಿಂದಾಗಿ ಕಮರುತ್ತದೆ. ಸಮಾಜದಲ್ಲಿ ಪರಿವರ್ತನಾಶೀಲ ಬದಲಾವಣೆಗಾಗಿ ಮತ್ತು ನಿಜವಾದ 'ರಚನಾತ್ಮಕ ಪೌರತ್ವ'ವನ್ನು ಪಡೆಯುವುದಕ್ಕಾಗಿ ಮಹಿಳೆಯರು ಮಾತೃತ್ವ ಮತ್ತು ಉದ್ಯೋಗದ ನಡುವೆ ಚೌಕಾಶಿ ಮಾಡಬೇಕಿಲ್ಲ ಎನ್ನುವುದನ್ನು ಕಾನೂನಿನ ರಕ್ಷಣೆಯು ಖಚಿತಪಡಿಸಬೇಕು ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries