ತಿರುವನಂತಪುರಂ: ಕೇರಳ ರಾಜ್ಯ ಲಾಟರಿ ಹೆಸರಿನಲ್ಲಿ ಆನ್‍ಲೈನ್‍ನಲ್ಲಿ ನಕಲಿ ಲಾಟರಿ ಮಾರಾಟ ಮಾಡುತ್ತಿರುವ ಆಪ್‍ಗಳನ್ನು ಪ್ಲೇ ಸ್ಟೋರ್‍ನಿಂದ ತೆಗೆದುಹಾಕುವಂತೆ ಕೇರಳ ಪೋಲೀಸರು ಗೂಗಲ್‍ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇಂತಹ ಆನ್‍ಲೈನ್ ಲಾಟರಿ ಜಾಹೀರಾತುಗಳನ್ನು ಫೇಸ್‍ಬುಕ್‍ನಿಂದ ತೆಗೆದುಹಾಕುವಂತೆ ಮೆಟಾಗೆ ಸೂಚನೆ ನೀಡಲಾಗಿದೆ. ಗೂಗಲ್ ಗೆ ನೋಟಿಸ್ ನೀಡಿರುವ ಬಗ್ಗೆ ಪೆÇಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಪೋಲೀಸರ ಸೈಬರ್ ಗಸ್ತು ಬಳಿಕ ಆನ್‍ಲೈನ್ ಲಾಟರಿಯ 60 ನಕಲಿ ಆ್ಯಪ್‍ಗಳು ಪತ್ತೆಯಾಗಿವೆ. ಹಗರಣಕ್ಕೆ ಸಂಬಂಧಿಸಿದಂತೆ 25 ನಕಲಿ ಫೇಸ್‍ಬುಕ್ ಪ್ರೊಫೈಲ್‍ಗಳು ಮತ್ತು 20 ವೆಬ್‍ಸೈಟ್‍ಗಳು ಪತ್ತೆಯಾಗಿವೆ. ಇಂತಹ ವಂಚನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ಎಚ್ಚರಿಕೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೇರಳ ರಾಜ್ಯ ಲಾಟರಿಯ ನಕಲಿ ಜಾಹೀರಾತು ಕೇರಳ ಮೆಗಾಮಿಲಿಯನ್ ಲಾಟರಿ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಆನ್‍ಲೈನ್‍ನಲ್ಲಿ ತೆಗೆದುಕೊಳ್ಳಬಹುದು ಮತ್ತು ಕೇರಳ ಸಮ್ಮರ್ ಸೀಸನ್ ಧಮಾಕಾ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಟೆಲಿಗ್ರಾಮ್, ಇನ್‍ಸ್ಟಾಗ್ರಾಮ್ ಇತ್ಯಾದಿಗಳ ಮೂಲಕ ಹರಿದಾಡುತ್ತಿದೆ. ಕೇರಳ ಸರ್ಕಾರ ಆನ್‍ಲೈನ್ ಲಾಟರಿ ಆರಂಭಿಸಿದೆ ಎಂಬ ಸಂದೇಶ ಬರುತ್ತಿದ್ದು, 40 ರೂಪಾಯಿ ಖರ್ಚು ಮಾಡಿದರೆ 12 ಕೋಟಿ ರೂಪಾಯಿ ಗೆಲ್ಲಬಹುದು. ಸಂದೇಶದಲ್ಲಿ ನಮೂದಿಸಿರುವ ನಂಬರ್‍ಗೆ 40 ರೂಪಾಯಿ ಕಳುಹಿಸಿದರೆ ನಕಲಿ ಲಾಟರಿ ಚಿತ್ರ ವಾಟ್ಸಾಪ್‍ಗೆ ರವಾನೆಯಾಗುತ್ತದೆ. ಡ್ರಾ ಸಮಯದ ನಂತರ, ವಂಚಕರು ಕೃತಕವಾಗಿ ರಚಿಸಿದ ಡ್ರಾ ಫಲಿತಾಂಶವನ್ನು ಕಳುಹಿಸುತ್ತಾರೆ ಮತ್ತು ಫಲಿತಾಂಶವನ್ನು ಪರಿಶೀಲಿಸಿದಾಗ, ಬಳಿಯಿರುವ ಟಿಕೆಟ್ 5 ಲಕ್ಷ ರೂಪಾಯಿಗಳ ಬಹುಮಾನವನ್ನು ಗೆದ್ದಿದೆ ಎಂದು ತೋರಿಸುತ್ತದೆ.
ಇದರೊಂದಿಗೆ ವಂಚನೆಯ ಮುಂದಿನ ಹಂತ ಪ್ರಾರಂಭವಾಗುತ್ತದೆ. ಒಬ್ಬ ವ್ಯಕ್ತಿಯು ಪೋನ್ ಕರೆ ಮಾಡಿ, ತನ್ನನ್ನು ತಾನು ಸರ್ಕಾರದ ಪ್ರತಿನಿಧಿ ಎಂದು ಪರಿಚಯಿಸಿಕೊಳ್ಳುತ್ತಾನೆ ಮತ್ತು ಬಹುಮಾನದ ಹಣವನ್ನು ಸ್ವೀಕರಿಸಲು ಜಿ.ಎಸ್.ಟಿ ಮತ್ತು ಸ್ಟ್ಯಾಂಪ್ ಡ್ಯೂಟಿ ಉದ್ದೇಶಗಳಿಗಾಗಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಕೇಳುತ್ತಾನೆ. ಈ ರೀತಿ ಹಣ ವರ್ಗಾವಣೆಯಾದಾಗ ಆರ್ ಬಿಐ ಬಹುಮಾನದ ಹಣವನ್ನು ವಶಪಡಿಸಿರುವುದರಿಂದ ಬಹುಮಾನವನ್ನು ವರ್ಗಾಯಿಸಲು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ. ಸಂತ್ರಸ್ತರಿಗೆ ಪ್ರತಿ ಹೆಜ್ಜೆಯೂ ನಂಬುವಂತೆ ಮಾಡಲು ಕೃತಕವಾಗಿ ತಯಾರಿಸಿದ ದಾಖಲೆಗಳು ಮತ್ತು ವೀಡಿಯೊಗಳನ್ನು ಒದಗಿಸಲಾಗುತ್ತದೆ. ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ನಕಲಿ ಲಾಟರಿಯ ಆನ್‍ಲೈನ್ ವಂಚನೆಗೆ ಸಾರ್ವಜನಿಕರು ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸಿನ ವಂಚನೆ ಕಂಡುಬಂದಲ್ಲಿ ತಕ್ಷಣ ಪೋಲೀಸರ ಸಂಖ್ಯೆ 1930 ಸಂಖ್ಯೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.