HEALTH TIPS

ವಯನಾಡ್ ಭೂಕುಸಿತ ಮಾನವನ ಅಸಡ್ಡೆ,‌ ದುರಾಸೆಗೆ ಪ್ರಕೃತಿಯ ಪ್ರತಿಕ್ರಿಯೆಗೆ ಒಂದು ನಿದರ್ಶನ: ಕೇರಳ ಹೈಕೋರ್ಟ್

          ಕೊಚ್ಚಿ: ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತಗಳು ಮಾನವನ ಅಸಡ್ಡೆ ಮತ್ತು ದುರಾಸೆಗೆ ಪ್ರಕೃತಿಯು ಪ್ರತಿಕ್ರಿಯಿಸಿರುವ ಇನ್ನೊಂದು ನಿದರ್ಶನವಾಗಿದೆ ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ.

         'ಬಹಳ ಹಿಂದೆಯೇ ಎಚ್ಚರಿಕೆಯ ಸಂಕೇತಗಳು ಕಾಣಿಸಿಕೊಂಡಿದ್ದವು,‌ ಆದರೆ ನಮ್ಮ ರಾಜ್ಯವನ್ನು ಆರ್ಥಿಕ ಸಮೃದ್ಧಿಯ ಉನ್ನತ ಪಥದಲ್ಲಿ ಇರಿಸಲಿದೆ ಎಂದು ಭಾವಿಸಿದ್ದ ಅಭಿವೃದ್ಧಿ ಅಜೆಂಡಾದ ಅನ್ವೇಷಣೆಯ ಹಿಂದೆ ಬಿದ್ದಿದ್ದ ನಾವು ಅವುಗಳನ್ನು ನಿರ್ಲಕ್ಷಿಸಿದ್ದೆವು' ಎಂದು ಹೇಳಿತು.

              2018 ಮತ್ತು 2019ರ ಪ್ರಕೃತಿ ವಿಕೋಪಗಳು ಹಾಗೂ ಸುಮಾರು ಎರಡು ವರ್ಷಗಳವರೆಗೆ ಕಾಡಿದ್ದ ಕೋವಿಡ್ ಸಾಂಕ್ರಾಮಿಕ ಮತ್ತು ಇತ್ತೀಚಿನ ಭೂಕುಸಿತಗಳು ನಾವು ತಪ್ಪು ಮಾರ್ಗದಲ್ಲಿ ಸಾಗುತ್ತಿದ್ದೇವೆ ಎನ್ನುವುದನ್ನು ತೋರಿಸಿವೆ' ಎಂದು ಜು.30ರ ವಯನಾಡ ಭೂಕುಸಿತಗಳ ಬಳಿಕ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ಸಂದರ್ಭದಲ್ಲಿ ಹೇಳಿದ ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಶ್ಯಾಮಕುಮಾರ ವಿ.ಎಂ. ಅವರ ಪೀಠವು, 'ನಾವು ಈಗಲೂ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಮತ್ತು ದೃಢವಾದ ಪರಿಹಾರ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಬಹುಶಃ ಅದು ತುಂಬ ತಡವಾಗಬಹುದು' ಎಂದು ಬೆಟ್ಟು ಮಾಡಿತು.

             ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳು ಮೂರು ಗ್ರಾಮಗಳನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಿವೆ. 300ಕ್ಕೂ ಅಧಿಕ ಜೀವಗಳು ಬಲಿಯಾಗಿದ್ದು, 119 ಜನರು ಈಗಲೂ ನಾಪತ್ತೆಯಾಗಿದ್ದಾರೆ.

           ಕೇರಳ ರಾಜ್ಯದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಪ್ರಸ್ತುತ ತಾನು ಹೊಂದಿರುವ ಕಲ್ಪನೆಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮತ್ತು ಇದಕ್ಕೆ ಸಂಬಂಧಿಸಿದಂತೆ ತನ್ನ ನೀತಿಯನ್ನು ಪುನರ್‌ಪರಿಶೀಲಿಸುವಂತೆ ರಾಜ್ಯ ಸರಕಾರದ ಮನವೊಲಿಸಲು ತಾನು ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಆರಂಭಿಸಿರುವುದಾಗಿ ಉಚ್ಚ ನ್ಯಾಯಾಲಯವು ತನ್ನ ಆ.23ರ ಆದೇಶದಲ್ಲಿ ತಿಳಿಸಿದೆ.

             ನೈಸರ್ಗಿಕ ಸಂಪನ್ಮೂಲಗಳ ಶೋಷಣೆ,ಪರಿಸರ,‌ ಅರಣ್ಯಗಳು ಮತ್ತು ವನ್ಯಜೀವಿ ಸಂರಕ್ಷಣೆ, ಪ್ರಕೃತಿ ವಿಕೋಪಗಳ ತಡೆ, ನಿರ್ವಹಣೆ ಮತ್ತು ತೀವ್ರತೆಯನ್ನು ತಗ್ಗಿಸುವಿಕೆ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ನೀತಿಗಳನ್ನು ತಾನು ಪರಿಶೀಲಿಸುವುದಾಗಿ ತಿಳಿಸಿದ ಪೀಠವು, ರಾಜ್ಯದಲ್ಲಿಯ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲು ಹಾಗೂ ಈ ಪ್ರದೇಶಗಳಲ್ಲಿ ತನ್ನ ನೀತಿಗಳನ್ನು ಪುನರ್‌ರೂಪಿಸಲು ಸರಕಾರಕ್ಕೆ ನೆರವಾಗಬಯಹುದಾದ ಸಂಸ್ಥೆಗಳು ಮತ್ತು ಏಜೆನ್ಸಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ನೆರವು ಕೋರಲು ಈ ನ್ಯಾಯಾಲಯದ ಹಸ್ತಕ್ಷೇಪ ಅಗತ್ಯವಾಗಿದೆ ಎಂದು ತಾನು ಭಾವಿಸಿದ್ದೇನೆ ಎಂದು ಹೇಳಿತು.

                ವಯನಾಡ್ ಜಿಲ್ಲೆಯಲ್ಲಿ ರಕ್ಷಣೆ,ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಪ್ರಯತ್ನಗಳನ್ನು ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡುವುದಾಗಿ ಹೇಳಿದ ನ್ಯಾಯಾಲಯವು,ಪಿಐಎಲ್ ವಿಚಾರಣೆಯು ಸಾಧಿಸಲು ಉದ್ದೇಶಿಸಿರುವ ಗುರಿಗಳಿಗಾಗಿ ಮೂರು ಹಂತಗಳ ಕಾರ್ಯತಂತ್ರಗಳನ್ನೂ ರೂಪಿಸಿತು.

ರಾಜ್ಯದಲ್ಲಿ ಸಂಭವಿಸಿರುವ ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ(ಡಿಎಂಎ) 2005ರಡಿ ಕಡ್ಡಾಯವಾಗಿರುವ ವಿಷಯ ತಜ್ಞರ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾವವನ್ನು ಹೊಂದಿವೆಯೇ ಎನ್ನುವುದನ್ನು ಸ್ಪಷ್ಟಪಡಿಸಿ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಕೇರಳ ಸರಕಾರಗಳಿಗೆ ಪೀಠವು ನಿರ್ದೇಶನವನ್ನೂ ನೀಡಿತು.

           ಡಿಎಂಎ ಅಡಿ ಸೂಚಿಸಿರುವಂತೆ ರಾಷ್ಟ್ರ,ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಲಹಾ ಸಮಿತಿಗಳನ್ನು ರಚಿಸಲಾಗಿದೆಯೇ ಮತ್ತು ರಚಿಸಲಾಗಿದ್ದರೆ ಅವುಗಳ ಸಂಯೋಜನೆ ಮತ್ತು ಡಿಎಂಎಗೆ ಅನುಗುಣವಾಗಿ ರಾಷ್ಟ್ರ,ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಿದ್ಧಗೊಳಿಸಲಾದ ವಿಪತ್ತು ನಿರ್ವಹಣೆ ಯೋಜನೆಗಳ ವಿವರಗಳನ್ನು ಅವುಗಳ ಇತ್ತೀಚಿನ ಮಾಹಿತಿಗಳೊಂದಿಗೆ ಸಲ್ಲಿಸುವಂತೆಯೂ ಉಚ್ಚ ನ್ಯಾಯಾಲಯವು ಕೇಂದ್ರ ಮತ್ತು ಕೇರಳ ಸರಕಾರಗಳಿಗೆ ಆದೇಶಿಸಿತು.

              ನ್ಯಾಯಾಲಯವು ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಲು ಉಭಯ ಸರಕಾರಗಳಿಗೆ ಮೂರು ವಾರಗಳ ಗಡುವು ನೀಡಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries