ಕಾಸರಗೋಡು: ಐಸಿಎಆರ್, ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‍ಸ್ಟಿಟ್ಯೂಟ್(ಸಿಪಿಸಿಆರ್‍ಐ) ಕಾಸರಗೋಡು ಮತ್ತು ಕೃಷಿ ವಿಜ್ಞಾನ ಕೇಂದ್ರ ಕಾಸರಗೋಡು ಜಂಟಿಯಾಗಿ ಕೃಷಿಕರ ಸಮಾವೇಶ ಸಿಪಿಸಿಆರ್‍ಐ ಸಭಾಂಗಣದಲ್ಲಿ ಭಾನುವಾರ ಜರುಗಿತು. ಸಿಪಿಸಿಆರ್‍ಐ ಕಾಸರಗೋಡು ವತಿಯಿಂದ ಅವಿಷ್ಕರಿಸಲಾದ ಎರಡು ತೆಂಗು ಹಾಗೂ ಎರಡು ಕೊಕ್ಕೋ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು.
ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಸಮಾರಂಭ ಉದ್ಘಾಟಿಸಿದರು. ಡಾ.ಬಿ. ಆಗಸ್ಟೀನ್ ಗೆರಾರ್ಡ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಜೆಕ್ಟ್ ಸಂಯೋಜಕ, ಪಾಮ್ಸ್‍ನ ನಿದೇಶಕ ಡಾ.ಕೆ. ಶಂಸುದ್ದೀನ್ ಮತ್ತು ಸಿಪಿಸಿಆರ್‍ಐ ಹಿರಿಯ ವಿಜ್ಞಾನಿಗಳಾದ ಡಾ.ಸಿ.ತಂಬಾನ್ ಅವರು ಹೊಸದಾಗಿ ಬಿಡುಗಡೆಯಾದ ತೆಂಗಿನ ತಳಿಗಳಾದ ಕಲ್ಪ ಸುವರ್ಣ ಮತ್ತು ಕಲ್ಪ ಶತಾಬ್ದಿ ಹಾಗೂ ಕೋಕೋ ತಳಿಗಳಾದ ವಿಟಿಎಲ್ ಸಿಎಚ್-1 ಮತ್ತು ವಿಟಿಎಲ್ ಸಿಎಚ್-2 ಕುರಿತು ಕೃಷಿಕರಿಗೆ ಮಾಹಿತಿ ನೀಡಿದರು. ನಂತರ ರೈತರೊಂದಿಗೆ ಸಂವಾದ ನಡೆಸಲಾಯಿತು.
ಐಸಿಎಆರ್-ಕೆವಿಕೆ ಕಾಸರಗೋಡು ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಮನೋಜಕುಮಾರ್ ಟಿ.ಎಸ್ ಸ್ವಾಗತಿಸಿ, ಕೆವಿಕೆ ಚಟುವಟಿಕೆಗಳು ಹಾಗೂ ವಿಶೇಷವಾಗಿ ಎಸ್‍ಸಿಎಸ್‍ಪಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಎಸ್‍ಎಂಎಸ್, ಐಸಿಎಆರ್-ಕೆವಿಕೆಯ ಡಾ.ಬೆಂಜಮಿನ್ ಮ್ಯಾಥ್ಯೂ ವಂದಿಸಿದರು.
ಸಮಾವೇಶದಲ್ಲಿ ಕಾಸರಗೋಡು ಜಿಲ್ಲೆಯ 77 ರೈತರು ಭಾಗವಹಿಸಿದ್ದರು. ಈ ಸಂದರ್ಭ ಭಾಗವಹಿಸಿದ್ದ ರೈತರಿಗೆ ಹೊಸದಾಗಿ ಬಿಡುಗಡೆಯಾದ ತೆಂಗಿನ ತಳಿಯ ಕಲ್ಪ ಸುವರ್ಣದ ಸಸಿಗಳನ್ನು ವಿತರಿಸಲಾಯಿತು.