ಮಂಜೇಶ್ವರ: ಇಂದಿನ ವಿದ್ಯಾರ್ಥಿಗಳೇ ನಾಳಿನ ಉತ್ತಮ ಪ್ರಜೆಯಾಗಿ ದೇಶಕ್ಕೆ ಮಾದರಿಯಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳನ್ನು ಉತ್ತಮ ಭವಿಷ್ಯದತ್ತ, ಸರಿಯಾದ ದಿಕ್ಕಿನತ್ತ ಸಾಗುವಲ್ಲಿ ಸಹಕಾರಿಯಾಗಿ ನಿಂತಿದೆ ಎಂದು ಶ್ರೀ ಸಾಯಿ ನಿಕೇತನ ಸೇವಾ ಸಂಸ್ಥೆಯ ಮುಖ್ಯಸ್ಥ ಡಾ. ಉದಯ್ ಕುಮಾರ್ ನೂಜಿ ತಿಳಿಸಿದ್ದಾರೆ.
ಅವರು ಶ್ರೀ ಸಾಯಿನಿಕೇತನ ಸೇವಾಶ್ರಮ ಸಂಸ್ಥೆಗೆ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಎನ್ನೆಸ್ಸೆಸ್ ವಿದ್ಯಾರ್ಥಿಗಳು ದೈನಂದಿನ ಶಿಬಿರ ಅಂಗವಾಗಿ ಭೇಟಿ ನೀಡಿದ ಸಂದರ್ಭ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ರಾಜೇಂದ್ರನ್ ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ, ಶಾರೀರಿಕ ಆರೋಗ್ಯಕ್ಕೆ ಎನ್ನೆಸ್ಸೆಸ್ ಕಾರ್ಯ ಚಟುವಟಿಕೆಗಳು ಉಪಯುಕ್ತವಾಗಿದೆ.ಈ ಆಶ್ರಮದಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ಒಂದು ಕುಟುಂಬದಂತೆ ಕಾಣುತ್ತಿರುದಕ್ಕೆ ಹಾಗೂ ಕಾರ್ಯಸಾಧನೆ ಮಾಡುವುದಕ್ಕೆ ಇಲ್ಲಿನ ಸಮೂಹ ಶಕ್ತಿಯಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.
ಎನ್ನೆಸ್ಸೆಸ್ನ 48 ಮಂದಿ ವಿದ್ಯಾರ್ಥಿಗಳು ಆಶ್ರಮದಲ್ಲಿ ಶ್ರಮದಾನ ಹಾಗೂ ಇನ್ನಿತರ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ನೃತ್ಯ, ಹಾಡು ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಆಶ್ರಮವಾಸಿಗಳು ಕೂಡ ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡರು. ಶ್ರೀ ಸಾಯಿನಿಕೇತನ ಸಂಸ್ಥೆಯ ಕೋಶಾಧಿಕಾರಿ ಡಾ.ಶಾರದಾ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ವಿದ್ಯಾರ್ಥಿ ವಿಭಾಗದ ನಾಯಕ ಅಬ್ದುಲ್ ಅರ್ಫಾಜ್, ವಿದ್ಯಾರ್ಥಿನಿಯರ ವಿಭಾಗದ ನಾಯಕಿ ನಂದನ ನೇತೃತ್ವ ವಹಿಸಿದ್ದರು.