ನವದೆಹಲಿ: 'ಭಾರತವು ಅತಿಹೆಚ್ಚು ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಉತ್ಪಾದಿಸುವ ರಾಷ್ಟ್ರವಾಗಿದೆ. ಹಾಗಾಗಿ, ಜಾಗತಿಕ ಆಹಾರ ಮತ್ತು ಪೌಷ್ಟಿಕತೆಯ ಭದ್ರತೆಗೆ ಮಾರ್ಗೋಪಾಯ ಹುಡುಕುವ ಕೆಲಸ ಮಾಡಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಶನಿವಾರದಿಂದ ಆರಂಭವಾದ 32ನೇ ಕೃಷಿ ಅರ್ಥಶಾಸ್ತ್ರಜ್ಞರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, 'ಕೃಷಿಯು ಭಾರತದ ಆರ್ಥಿಕ ನೀತಿಗಳ ಕೇಂದ್ರಬಿಂದುವಾಗಿದೆ.
65 ವರ್ಷಗಳ ಹಿಂದೆ ಭಾರತವು ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನವನ್ನು ಸಂಘಟಿಸಿತ್ತು. ಆಗ ದೇಶ ಸ್ವಾತಂತ್ರ್ಯಗೊಂಡು ಕೆಲವು ವರ್ಷಗಳಾಗಿದ್ದವು. ಹಾಗಾಗಿ, ಕೃಷಿ ಮತ್ತು ಆಹಾರ ಭದ್ರತೆಯ ಸವಾಲುಗಳನ್ನು ಎದುರಿಸುತಿತ್ತು. ಪ್ರಸ್ತುತ ಹಾಲು, ಬೇಳೆಕಾಳು ಮತ್ತು ಸಂಬಾರ ಪದಾರ್ಥಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿ, ಹತ್ತಿ, ಸಕ್ಕರೆ ಮತ್ತು ಚಹಾ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂದು ತಿಳಿಸಿದರು.
ಕಳೆದ ಹತ್ತು ವರ್ಷಗಳಲ್ಲಿ ಉಷ್ಣಾಂಶ ತಾಳಿಕೆಯ 1,900 ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
70 ದೇಶಗಳ ಒಂದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
'ಹಸಿವು ಮುಕ್ತ ಗುರಿ ಕಷ್ಟಸಾಧ್ಯ'
'2030ರೊಳಗೆ ಜಗತ್ತನ್ನು ಹಸಿವು ಮುಕ್ತಗೊಳಿಸುವ ವಿಶ್ವಸಂಸ್ಥೆಯ ಗುರಿ ಈಡೇರಿಕೆಯು ಕಷ್ಟಸಾಧ್ಯ' ಎಂದು ಜರ್ಮನಿಯ ಕೃಷಿ ಅರ್ಥಶಾಸ್ತ್ರಜ್ಞ ಮಾರ್ಟಿನ್ ಕೈಮ್ ಹೇಳಿದ್ದಾರೆ. ಸಮ್ಮೇಳನದಲ್ಲಿ ಮಾತನಾಡಿದ ಅವರು 'ಪ್ರಸ್ತುತ ವಿಶ್ವದಾದ್ಯಂತ ಹಸಿವು ಮತ್ತು ಅಪೌಷ್ಟಿಕತೆ ಆವರಿಸಿಕೊಂಡಿದೆ. ಇದು ಅಭಿವೃದ್ಧಿಗೆ ತೊಡಕಾಗಿದೆ. ಹಾಗಾಗಿ ವಿಶ್ವಸಂಸ್ಥೆಯ ಆಶಯ ಈಡೇರುವುದು ಕಷ್ಟಕರವಾಗಿದೆ' ಎಂದರು. 'ಹಸಿವು ಮತ್ತು ಅಪೌಷ್ಟಿಕತೆ ಪ್ರಮಾಣ ಹೆಚ್ಚಳಕ್ಕೆ ಜಾಗತಿಕ ತಾಪಮಾನ ಮತ್ತು ಬಿಕ್ಕಟ್ಟುಗಳು ಕಾರಣವಾಗಿವೆ. ಜೊತೆಗೆ ನಮ್ಮ ಆಹಾರ ವ್ಯವಸ್ಥೆಗಳು ಕೂಡ ಹವಾಮಾನ ವೈಪರೀತ್ಯ ಮತ್ತು ಇತರೆ ಪರಿಸರ ಸಂಬಂಧಿ ಸಮಸ್ಯೆಗಳಿಗೆ ಕೊಡುಗೆ ನೀಡುತ್ತಿವೆ. ಇದನ್ನು ನಾವು ಅಲಕ್ಷ್ಯ ಮಾಡುವಂತಿಲ್ಲ' ಎಂದು ಹೇಳಿದರು.