ಕುಂಬಳೆ: ಭಾರತೀಯ ಕೆಥೋಲಿಕ ಯುವ ಸಂಚಲನ ಪೆರ್ಮುದೆ ಘಟಕದ ಆಶ್ರಯದಲ್ಲಿ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ವೃದ್ಧರ ದಿನ ಆಚರಿಸಲಾಯಿತು. ಬದುಕಿನ ದಾರಿ ತೋರಿಸಿದ ಹಿರಿಯರಿಗೆ ಹೂವು ನೀಡಿ ಕೃತಜ್ಞತೆ ಸಲ್ಲಿಸಲಾಯಿತು. ಧರ್ಮಗುರು ಫಾ.ಹೆರಾಲ್ಡ್ ಡಿ'ಸೋಜ ಅವರು ಹಿರಿಯರನ್ನು ಉದ್ದೇಶಿಸಿ ಮಾತನಾಡಿ, ವಯಸ್ಕರನ್ನು ಗೌರವಿಸುವುದು ನಮ್ಮ ಕರ್ತವ್ಯ, ಅವರ ನಡೆನುಡಿಗಳು ನಮಗೆ ಜೀವನದ ಪಾಠ, ಅವರ ಆಶೀರ್ವಾದ ಸದಾ ನಮ್ಮೊಂದಿಗಿರುತ್ತದೆ ಎಂದರು.
ಹಿರಿಯರಾದ, ಪೈವಳಿಕೆ ಪಂಚಾಯತಿ ಮಾಜಿ ಸದಸ್ಯೆ ಥೆರೆಸಾ ಡಿ'ಸೋಜ ತಮ್ಮ ಅನುಭವಗಳನ್ನು ಹಂಚಿಕೊAಡರು. ವಯೋಜನರಿಗೆ ಕೃತಜ್ಞತೆ ಸಲ್ಲಿಸಿ ಗಾಯನ ನಡೆಯಿತು.
ಸಹಾಯಕ ಧರ್ಮಗುರು ಫಾ.ಕ್ಲೋಡ್ ಕೋರ್ಡಾ, ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೆರಾ, ಕಾರ್ಯದರ್ಶಿ ಲ್ಯಾನ್ಸಿ ಡಿಸೋಜ ಉಪಸ್ಥಿತರಿದ್ದರು. ಐಸಿವೈಎಂ ಘಟಕ ಕಾರ್ಯದರ್ಶಿ ಮೋನಿಕಾ ಡಿ'ಅಲ್ಮೇಡಾ ಮಾಣಿ ಕಾರ್ಯಕ್ರಮ ನಿರೂಪಿಸಿದರು.