ಅಹಮದಾಬಾದ್: ಗುಜರಾತ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆಯನ್ನು ನೀಡಿದೆ.
ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶದಿದಾಗಿ ಚಂಡಮಾರುತ ರೂಪುಗೊಂಡು ಅಪ್ಪಳಿಸುವ ಸಾಧ್ಯತೆಯಿದೆ.
ಹವಾಮಾನ ಇಲಾಖೆಯ ಎಚ್ಚರಿಕೆ ಬಳಿಕ ಕಚ್ ಜಲ್ಲಾಧಿಕಾರಿ ಅಮಿತ್ ಅರೋರಾ, ವಿಡಿಯೊ ಸಂದೇಶದ ಮೂಲಕ ಅಬ್ದಾಸಾ, ಮಾಂಡ್ವಿ, ಲಖ್‌ಪತ್ ತಾಲ್ಲೂಕುಗಳ ನಿವಾಸಿಗಳು ಶಾಲೆ ಅಥವಾ ಇತರೆ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯುವಂತೆ ಸೂಚನೆ ನೀಡಿದ್ದಾರೆ.
ಈ ಸಂಕಷ್ಟದಲ್ಲಿ ಬಡವರಿಗೆ ಸಹಾಯ ಮಾಡುವಂತೆ ಸ್ಥಳೀಯರಿಗೂ ಅವರು ಕರೆ ನೀಡಿದ್ದಾರೆ.
ಗುಜರಾತ್‌ನಲ್ಲಿ ಭಾರಿ ಮಳೆ, ಪ್ರವಾಹ
ಪೂರ್ವ ಅರಬ್ಬೀ ಸಮುದ್ರದಲ್ಲಿ ರೂಪುಗೊಳ್ಳಲು ಸಾಧ್ಯತೆಯಿರುವ ಚಂಡಮಾರುತ ಮುಂದಿನ 12 ತಾಸಿನಲ್ಲಿ ಕಚ್ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಮತ್ತಷ್ಟು ತೀವ್ರವಾಗಿ ಅಪ್ಪಳಿಸುವ ಸಾಧ್ಯತೆಯಿದೆ. ಮುಂದಿನ ಎರಡು ದಿನಗಳಲ್ಲಿ ಭಾರತೀಯ ಕರಾವಳಿಯಿಂದ ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವೇಳೆ ಸಮುದ್ರ ಪ್ರಕ್ಷುಬ್ದವಾಗಿರಲಿದ್ದು, ಗುಜರಾತ್ ಕರಾವಳಿ ಉದ್ದಕ್ಕೂ ಗಂಟೆಗೆ 75 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಹವಾಮಾನ ಇಲಾಖೆಯ ಎಚ್ಚರಿಕೆಯ ಬೆನ್ನಲ್ಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗಾಂಧಿನಗರದಲ್ಲಿರುವ ರಾಜ್ಯ ತುರ್ತು ಕಾರ್ಯಪಡೆಯನ್ನು ಸಂಪರ್ಕಿಸಿ ಜಿಲ್ಲಾಡಳಿತದ ಪೂರ್ವ ಸಿದ್ಧತೆಯ ಬಗ್ಗೆ ಅವಲೋಕನ ನಡೆಸಿದ್ದಾರೆ.
ಒಂದು ವೇಳೆ ಚಂಡಮಾರುತವಾಗಿ ಮಾರ್ಪಟ್ಟರೆ ಅದಕ್ಕೆ ಪಾಕಿಸ್ತಾನದ ಸೂಚನೆಯಂತೆ 'ಅಸ್ನಾ' ಎಂದು ಹೆಸರಿಡಲಾಗುವುದು.
ಅರಬ್ಬೀ ಸಮುದ್ರದಲ್ಲಿ ಆಗಸ್ಟ್ ತಿಂಗಳಲ್ಲಿ ಚಂಡಮಾರುತ ಸೃಷ್ಟಿಯಾಗುವುದು ಅಪರೂಪದ ವಿದ್ಯಮಾನವಾಗಿದೆ.
ಗುಜರಾತ್‌ನಲ್ಲಿ ಭಾರಿ ಮಳೆ, ಪ್ರವಾಹ