ಕಾಸರಗೋಡು: ಕುಂಬ್ಡಾಜೆ ಪಂಚಾಯಿತಿ ಉಬ್ರಂಗಳ ಬೆದ್ರಡಿ ನಿವಾಸಿ, ಖ್ಯಾತ ದೈವನರ್ತನ ಕಲಾವಿದ ಮನು ಪಣಿಕ್ಕರ್ ಮತ್ತು ಅವರ ಕುಟುಂಬದವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10000 ರೂ. ಮೊತ್ತ ದೇಣಿಗೆಯಾಗಿ ನೀಡಿದ್ದಾರೆ.
ಕರ್ಕಾಟಕ ಮಾಸದಲ್ಲಿ ಮನೆ ಮನೆಗೆ ಆಶೀರ್ವಾದದೊಂದಿಗೆ ಬರುವ ಆಟಿ ಬೇಡ(ಆಟಿ ಕಳಂಜ)ನ ಮೂಲಕ ಸಂಗ್ರಹವಾಗಿರುವ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. ಮನು ಪಣಿಕ್ಕರ್ ಅವರು ಯಕ್ಷಗಾನ, ಚೆಂಡೆ ನಿರ್ಮಾಣ ಮತ್ತು ದೈವನರ್ತನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಸಕರಾದ ಎಂ. ರಾಜಗೋಪಾಲನ್, ವಕೀಲ ಸಿ.ಎಚ್ ಕುಞಂಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರಿಗೆ ಮೊತ್ತವನ್ನು ಹಸ್ತಾಂತರಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಘಟಕ ಅಧ್ಯಕ್ಷ ಅಖಿಲೇಶ್ ನಗುಮುಗಂ, ಕುಂಬ್ಡಾಜೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಗೋಸಾಡ, ಲೇಖಕಿ ಸುಶ್ಮಿತಾ ಹಾಗೂ ಪಣಿಕ್ಕರ್ ಕುಟುಂಬಸ್ಥರು ಜತೆಗಿದ್ದರು.