ತಿರುವನಂತಪುರಂ: ಕೃಷಿ ಕ್ಷೇತ್ರ ಸೇರಿದಂತೆ ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಸಮಸ್ಯೆಗಳನ್ನು ಎದುರಿಸಲು ಎರಡು ವರ್ಷಗಳ ಹಿಂದೆ ಸರ್ಕಾರ ರೂಪಿಸಿದ ಕ್ರಿಯಾ ಯೋಜನೆ ಇನ್ನೂ ಸಾಕಾರಗೊಂಡಿಲ್ಲ.
2022 ರಿಂದ 7 ವರ್ಷಗಳ ಕಾಲ ರಾಜ್ಯದಲ್ಲಿ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಬಗ್ಗೆ ರಾಜ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ನಿರ್ದೇಶನಾಲಯವು ಹವಾಮಾನ ಬದಲಾವಣೆ ಕುರಿತು ಕೇರಳ ರಾಜ್ಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿತ್ತು. ಆದರೆ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ಈವರೆಗೂ ಮುಂದಾಗಿಲ್ಲ. ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಜೈವಿಕ ಆವಾಸಸ್ಥಾನ, ಆರೋಗ್ಯ ಮತ್ತು ನೀರಿನ ಬಳಕೆ ಕ್ಷೇತ್ರಗಳಿಗೆ ವಿಶೇಷ ಗಮನ ನೀಡಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿತ್ತು. ಹವಾಮಾನ ಬದಲಾವಣೆಯಿಂದ ಅಪಾಯದ ಪ್ರದೇಶಗಳನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ಒಂದುಹಂತದಲ್ಲಿ ಘೋಷಿಸಿಯೂ ಇತ್ತು.
ಹವಾಮಾನ ಬದಲಾವಣೆಯಿಂದ ಕೃಷಿ ನಷ್ಟ ಪ್ರತಿ ವರ್ಷ ಹೆಚ್ಚುತ್ತಿದೆ. ಬಿಸಿಲಿನ ಝಳಕ್ಕೆ ತುತ್ತಾಗಿ, ಬಳಿಕದ ಬೇಸಿಗೆ ಮಳೆ ರೈತರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಇಂತಹ ವಿಷಯಗಳಲ್ಲಿ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡುತ್ತಿದೆಯೇ ಹೊರತು ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ತೋರುತ್ತಿಲ್ಲ ಎಂಬ ಆಪಾದನೆ ಕೇಳಿಬಂದಿದೆ.