ಕಾಸರಗೋಡು: ಸರ್ಕಾರದ ನೂರು ದಿವಸಗಳ ಕ್ರಿಯಾ ಯೋಜನೆ ಅಂಗವಾಗಿ ಪ್ರಯಾಣ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಸಾರಿಗೆ ಸೌಲಭ್ಯ ಒದಗಿಸುವುದರ ಜತೆಗೆ ಸಾರಿಗೆ ವ್ಯವಸ್ಥೆಗೆ ಹೊಸ ದಾರಿಗಳನ್ನು ಸೂಚಿಸಿ, ಚರ್ಚಿಸಲು ಸಾರ್ವಜನಿಕ ಸಭೆ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ.
ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿರುವುದು. ಕಾಸರಗೋಡು ಮತ್ತು ಉದುಮ ವಿಧಾನಸಭೆಯ ಸಾರ್ವಜನಿಕ ಸಭೆಯು ಆಗಸ್ಟ್ 5ಮತ್ತು 6ರಂದು ಬೆಳಗ್ಗೆ 10.30 ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಲಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸಭೆ ಆ. 8ರಂದು ಮಧ್ಯಾಹ್ನ 12ಕ್ಕೆ ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿರುವುದು.ಪ್ರಯಾಣ ಸಮಸ್ಯೆ ಎದುರಿಸುತ್ತಿರುವ ರೂಟ್‌ಗಳಲ್ಲಿ ಹೊಸದಾಗಿ ಸ್ಟೇಜ್ ಕ್ಯಾರೇಜ್ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಗಳ ಕುರಿತು ವಿವರವಾದ ಸೂಚನೆಗಳನ್ನು ಸಾರ್ವಜನಿಕರು, ವಸತಿ ಕೇಂದ್ರಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಆಯಾ ಪಂಚಾಯಿತಿಗಳಲ್ಲಿ ಸಲ್ಲಿಸಬೇಕು. ಪಂಚಾಯಿತಿ ಅಧ್ಯಕ್ಷರು ಅದನ್ನು ಕ್ರೋಡೀಕರಿಸಿ ಸಭೆಯಲ್ಲಿ ಮಂಡಿಸುವರು. ತ್ರಿಸ್ತರ ಪಂಚಾಯಿತಿ ಅಧಿಕಾರಿಗಳು, ಪಂಚಾಯಿತಿ ಕಾರ್ಯದರ್ಶಿಗಳು, ಪೋಲಿಸ್ ಅಧಿಕಾರಿಗಳು, ಪಿಡಬ್ಲೂö್ಯಡಿ ಎಂಜಿನಿಯರ್‌ಗಳು ಮತ್ತು ಗ್ರಾಮ ಪಂಚಾಯಿತಿ ಎಂಜಿನಿಯರ್‌ಗಳು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಅವರು ಹೊಸ ಮಾರ್ಗಗಳ ಕುರಿತಾಗಿರುವ ಚರ್ಚೆಯಲ್ಲಿ ಪಾಲ್ಗೊಳ್ಳುವರು ಎಂದು ಸಾರ್ವಜನಿಕ ಸಭೆಯ ಸಂಚಾಲಕ, ಆರ್‌ಟಿಓ ಸಜಿ ಪ್ರಸಾದ್ ಮಾಹಿತಿ ನೀಡಿದ್ದಾರೆ.