ಬೆಂಗಳೂರು: ಕಾರವಾರದ ಶಿರೂರು ಭೂ ಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ನಿವಾಸಿಗಳಾದ ಅರ್ಜುನ್ ಮತ್ತು ಇತರರ ಪತ್ತೆಗೆ ಮತ್ತೆ ಕಾರ್ಯಾಚರಣೆ ಆರಂಭಿಸುವಂತೆ ಕೇರಳ ರಾಜ್ಯದ ಕೋಜಿಕೋಡ್ ಲೋಕಸಭಾ ಕ್ಷೇತ್ರದ ಸಂಸದ ರಾಘವನ್ ನೇತೃತ್ವದ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿದರು. ಜುಲೈ 16 ರಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ದುರಂತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.
ಕೋಜಿಕೋಡ್ ಸಂಸದ ರಾಘವನ್, ಕೇರಳ ಶಾಸಕ ಎಕೆಎಫ್ ಅಶ್ರಫ್, ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆಗೆ ಡ್ರೆಡ್ಜರ್ ತರಲು ಅನುಮತಿ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.
ಇತ್ತೀಚೆಗೆ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದ ಪರಿಣಾಮವಾಗಿ ಕೇರಳದ ಅರುಣ್, ಜಗನ್ನಾಥನ್ ಮತ್ತು ಲೋಕೇಶ್ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ವಿವಿಧ ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳೊಂದಿಗೆ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳೊಂದಿಗೆ ಹಗಲಿರುಳು ಶ್ರಮಿಸಿದ ಪೊಲೀಸರು ಸೇರಿದಂತೆ ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಕೃತಜ್ಞನಾಗಿರುವುದಾಗಿ ರಾಘವನ್ ಪತ್ರದಲ್ಲಿ ತಿಳಿಸಿದ್ದಾರೆ.
ಕಷ್ಟಪಟ್ಟು ಕೆಲಸ ಮಾಡಿದರೂ ಕಾಣೆಯಾದವರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ಡ್ರೆಡ್ಜರ್ ನೆರವಿನಿಂದ ಅವರನ್ನು ಕಂಡುಹಿಡಿಯುವ ಸಾಧ್ಯತೆ ಇನ್ನೂ ಇದೆ ಎಂದು ನಂಬುತ್ತೇವೆ. ಆದ್ದರಿಂದ ನಾಪತ್ತೆಯಾದ ವ್ಯಕ್ತಿಗಳನ್ನು ಹುಡುಕಲು ಗಂಗಾವಳಿ ನದಿಯಲ್ಲಿ ಡ್ರೆಡ್ಜರ್ ನಿಯೋಜಿಸಲು ಅನುಮತಿ ನೀಡಬೇಕು. ಡ್ರೆಡ್ಜರ್ ಬಳಸಿ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪುನರಾರಂಭಿಸಲು ಕಾರವಾರ ಜಿಲ್ಲಾಡಳಿತಕ್ಕೆ ಅಗತ್ಯ ಸೂಚನೆಗಳನ್ನು ನೀಡುವಂತೆ ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಅಧಿಕಾರಿಗಳ ಪ್ರಕಾರ, ಪ್ರತಿಕೂಲ ಹವಾಮಾನ ಪರಿಸ್ಥಿತಿ, ಹೆಚ್ಚಿನ ನದಿ ಪ್ರವಾಹ ಮತ್ತು ಇತರ ಕಾರಣಗಳಿಂದ ಜುಲೈ 28 ರಂದು ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ನಂತರ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಲಾರಿ ಚಾಲಕನನ್ನು ಪತ್ತೆಹಚ್ಚಲು ಕಾರ್ಯಾಚರಣೆಯನ್ನು ಪುನರಾರಂಭಿಸುವಂತೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ತದನಂತರ ಆಗಸ್ಟ್ 14 ರಂದು ಕಾರ್ಯಾಚರಣೆಯನ್ನು ಪುನರಾರಂಭಿಸಲಾಯಿತು ಆದರೆ ಮತ್ತೆ ವಿವಿಧ ಕಾರಣಗಳಿಂದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.