HEALTH TIPS

ಕೆಲವು ಕುಟುಂಬಗಳೇ ಸಮಾಧಿ; ಕುಳಿತ ಸ್ಥಿತಿಯಲ್ಲೇ ಶವಗಳು ಪತ್ತೆ

          ತಿರುವನಂತಪುರ: ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಸರಣಿ ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ ರಾತ್ರಿ ವೇಳೆಗೆ 200ಕ್ಕೆ ಏರಿದೆ. ಇನ್ನೂ 150 ಮಂದಿ ನಾಪತ್ತೆಯಾಗಿದ್ದು ಆತಂಕ ಹೆಚ್ಚಿಸಿದೆ.

            ಹವಾಮಾನ ಪರಿಸ್ಥಿತಿ, ಕೆಸರು, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವುದು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿವೆ.

          ಬುಧವಾರ ರಾತ್ರಿ ವೇಳೆಗೆ 171 ಶವಗಳನ್ನು ಅವಶೇಷಗಳಡಿಯಿಂದ ಹೊರಗೆಳೆಯಲಾಗಿದೆ. ಅದರಲ್ಲಿ 97 ಶವಗಳ ಗುರುತು ಪತ್ತೆ ಹಚ್ಚಲಾಗಿದ್ದು, 51 ಪುರುಷರು ಮತ್ತು 46 ಮಹಿಳೆಯರು ಸೇರಿದ್ದಾರೆ. ನಾಪತ್ತೆಯಾಗಿರುವವರಲ್ಲಿ 58 ಮಹಿಳೆಯರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

             ಸಾವಿನ ಸಂಖ್ಯೆ 270ಕ್ಕೇರಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೆಸರು ತುಂಬಿದ ಮನೆಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ರಕ್ಷಣಾ ಸಿಬ್ಬಂದಿಯನ್ನು ಆಘಾತಕ್ಕೀಡುಮಾಡಿದೆ. ಕೆಲವರು ಕುರ್ಚಿ ಮೇಲೆ ಕುಳಿತ ಸ್ಥಿತಿಯಲ್ಲೇ ಜೀವಕಳೆದುಕೊಂಡಿದ್ದಾರೆ. ಬದುಕುಳಿಯಲು ಓಡಿಹೋಗಲು ಯತ್ನಿಸಿದವರ ದೇಹಗಳು ಚೆಲ್ಲಾಪಿಲ್ಲಿಯಾಗಿವೆ. ಕೆಲವು ಕುಟುಂಬಗಳೇ ಸಂಪೂರ್ಣವಾಗಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಹಲವು ಕುಟುಂಬಗಳಲ್ಲಿ ಒಬ್ಬರು ಅಥವಾ ಇಬ್ಬರಷ್ಟೇ ಉಳಿದುಕೊಂಡಿದ್ದಾರೆ.

             ಮುಂಡಕ್ಕೈಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕುಸಿದಿದೆ. ಹೀಗಾಗಿ, ಭೂಕುಸಿತದ ಕೇಂದ್ರ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನದ ನಂತರ ಯಾಂತ್ರೀಕೃತ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ರಕ್ಷಣಾ ಸಿಬ್ಬಂದಿ ನಿರ್ಮಿಸಿರುವ ತಾತ್ಕಾಲಿಕ ಮಾರ್ಗವೂ ಮುಳುಗಡೆಯಾಗಿದ್ದು, ಮತ್ತೊಂದು ಭೂಕುಸಿತದ ಆತಂಕ ಸೃಷ್ಟಿಸಿದೆ. ಬೈಲಿ ಬ್ರಿಡ್ಜ್‌ (ತಾತ್ಕಾಲಿಕ ಸೇತುವೆ) ನಿರ್ಮಿಸುವ ಕಾರ್ಯ ಭರದಿಂದ ಸಾಗಿದ್ದು, ನಂತರವಷ್ಟೇ ಪೂರ್ಣಪ್ರಮಾಣದ ಕಾರ್ಯಾಚರಣೆ ಸಾಧ್ಯವಾಗಲಿದೆ.

              ವಯನಾಡು ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿರುವ ಮುಂಡಕ್ಕೈ, ಚೂರಲ್ಮಲ ಮತ್ತು ಅಟ್ಟಮಲದಲ್ಲಿ ಭೂಕುಸಿತ ಸಂಭವಿಸಿರುವ ಸ್ಥಳದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಪಕ್ಕದ ಮಲ‌ಪ್ಪುರಂ ಜಿಲ್ಲೆಯ ಪೋಥುಕಲ್‌ನಲ್ಲಿ ಸುಮಾರು 75 ಶವಗಳನ್ನು ಹೊರತೆಗೆಯಲಾಗಿದೆ.

ಅವಶೇಷಗಳಲ್ಲಿ ಶವಗಳು ಇವೆಯೇ ಎಂಬುದನ್ನು ಪತ್ತೆ ಹಚ್ಚಲು ಶ್ವಾನದಳ ಮತ್ತು ತಂತ್ರಜ್ಞಾನದ ಮೊರೆ ಹೋಗಲಾಗಿದೆ.

            ನಾಪತ್ತೆಯಾಗಿರುವವರಲ್ಲಿ ಕೆಲವರು ಸಂವಹನ ಸೌಕರ್ಯವಿಲ್ಲದ ಸ್ಥಳದಲ್ಲಿ ಸಿಲುಕಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಭಾಗದಲ್ಲಿರುವ ಹಲವು ಹೋಂ ಸ್ಟೇಗಳು ಸಮಾಧಿಯಾಗಿವೆ. ಇದು ಮತ್ತಷ್ಟು ಪ್ರವಾಸಿಗರು ಮೃತಪಟ್ಟಿರುವ ಶಂಕೆ ಮೂಡಿಸಿವೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಗುರುವಾರ ವಯನಾಡಿಗೆ ಭೇಟಿ ನೀಡಲಿದ್ದಾರೆ. ಭೂಕುಸಿತದ ಪ್ರದೇಶದಲ್ಲಿ ಸಿಲುಕಿದ್ದ 599 ಮಹಿಳೆಯರು, 299 ಮಕ್ಕಳು ಸೇರಿದಂತೆ ಒಟ್ಟು 1,386 ಮಂದಿಯನ್ನು ಸುರಕ್ಷಿತ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶವಗಳನ್ನು ಸಂಬಂಧಿಕರಿಗೆ ನೀಡುವ ಕಾರ್ಯವನ್ನು ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತ್ವರಿತಗೊಳಿಸಿದ್ದಾರೆ. ಸಾಮೂಹಿಕ ಅಂತ್ಯ ಸಂಸ್ಕಾರಕ್ಕೆ ವಯನಾಡಿನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.

               ಏತನ್ಮಧ್ಯೆ, ಕೋಯಿಕ್ಕೋಡ್‌, ಮಲಪ್ಪುರಂ ಜಿಲ್ಲೆಗಳಲ್ಲಿಯೂ ಬುಧವಾರ ಸಣ್ಣ ಪ್ರಮಾಣದ ಭೂಕುಸಿತ ಪ್ರಕರಣಗಳು ವರದಿಯಾಗಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries