ಶಿರೂರು: ಇತ್ತೀಚೆಗೆ ಶಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಲಾರಿ ಡ್ರೈವರ್ ಅರ್ಜುನ್ ಮೃತದೇಹ ಕೊನೆಗೂ ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಇದನ್ನು ಖಚಿತಪಡಿಸಲು ಪೊಲೀಸರು ಪರೀಕ್ಷೆ ನಡೆಸಲಿದ್ದಾರೆ.
ಶಿರೂರು ಗುಡ್ಡ ಕುಸಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು.
ಈ ಪೈಕಿ 8 ಮಂದಿಯ ಮೃತದೇಹ ಪತ್ತೆಯಾಗಿತ್ತು. ಕೇರಳ ಲಾರಿ ಡ್ರೈವರ್ ಅರ್ಜುನ್ ಸೇರಿದಂತೆ 3 ಮಂದಿ ಮೃತದೇಹ ಪತ್ತೆಗಾಗಿ ಸಾಕಷ್ಟು ಶೋಧ ಕಾರ್ಯ ನಡೆಸಲಾಗಿತ್ತು. ಅರ್ಜುನ್ ಲಾರಿಯ ಅವಶೇಷಗಳು ನದಿಯಲ್ಲಿ ಪತ್ತೆಯಾಗಿತ್ತು. ಆದರೆ ಅರ್ಜುನ್ ಮೃತದೇಹ ಪತ್ತೆಯಾಗಿರಲಿಲ್ಲ. ಭಾರತೀಯ ಸೇನೆಯನ್ನೇ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಕೇರಳ ಸರ್ಕಾರದಿಂದ ಅರ್ಜುನ್ ಮೃತದೇಹ ಪತ್ತೆಗಾಗಿ ಒತ್ತಡವಿತ್ತು. ಆದರೆ ಏನೇ ಆದರೂ ಗಂಗಾವಳಿ ನದಿಯ ಹರಿವಿನ ತೀವ್ರತೆ ಹೆಚ್ಚಾಗಿದ್ದರಿಂದ ಮೃತದೇಹ ಪತ್ತೆಯಾಗಿರಲೇ ಇಲ್ಲ. ಇದೀಗ ಘಟನೆ ನಡೆದು 19 ದಿನಗಳು ಕಳೆದಿದ್ದು ಈಗ ಹೊನ್ನಾವರ ಸಮುದ್ರ ದಂಡೆಯಲ್ಲಿ ಅಪರಿಚಿತ ಮೃತದೇಹವೊಂದು ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಮೃತದೇಹ ಅರ್ಜುನ್ ನದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಖಚಿತವಾಗಿ ಯಾರದ್ದು ಎಂದು ಗುರುತಿಸುವ ಸ್ಥಿತಿಯಲ್ಲಿಲಲ್ಲ. ಹೀಗಾಗಿ ಪೊಲೀಸರು ಶವವನ್ನು ದಡಕ್ಕೆ ತಂದು ಡಿಎನ್ ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಅರ್ಜುನ್ ನದ್ದೇ ಮೃತದೇಹವೆ ಎಂದು ಖಚಿತಪಡಿಸಲು ಆತನ ಸಹೋದರ ಅಭಿಜಿತ್ ನ ಸ್ಯಾಂಪಲ್ ಗಳನ್ನು ಮ್ಯಾಚ್ ಮಾಡಲಾಗುತ್ತಿದೆ.