ಕೊಚ್ಚಿ: ಸಂಬಂಧಿಕರ ವಿರುದ್ಧ ದಾಖಲಾಗಿರುವ ಕಿರುಕುಳದ ದೂರುಗಳಲ್ಲಿ ಮಕ್ಕಳನ್ನು ಬಂಧಿಸುವ ಮುನ್ನ ಪೋಲೀಸರು ಅತ್ಯಂತ ಜಾಗರೂಕರಾಗಿರಬೇಕು ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
ಸುಳ್ಳು ದೂರುಗಳು ಹೆಚ್ಚುತ್ತಿರುವುದು ನ್ಯಾಯಾಲಯವನ್ನೂ ಬಿಕ್ಕಟ್ಟಿಗೆ ಸಿಲುಕಿಸುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಶಾಲಾ ವಿದ್ಯಾರ್ಥಿನಿಯೊಬ್ಬಳು ಸಹಪಾಠಿ ಜೊತೆಗಿನ ಪ್ರೇಮ ಪ್ರಕರಣವನ್ನು ಮನೆಯಲ್ಲಿ ಬಹಿರಂಗಪಡಿಸಿದ್ದಕ್ಕೆ ಪ್ರತೀಕಾರವಾಗಿ ಇಬ್ಬರು ಯುವ ಸಂಬಂಧಿಗಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿರುವ ಘಟನೆಯಲ್ಲಿ ನ್ಯಾಯಾಲಯ ಈ ಎಚ್ಚರಿಕೆ ನೀಡಿದೆ.
ಯುವಕ 62 ದಿನಗಳ ಜೈಲುವಾಸ ಅನುಭವಿಸಬೇಕಾಗಿ ಬಂದ ನಂತರ ಬಾಲಕಿಯೇ ನ್ಯಾಯಾಲಯಕ್ಕೆ ಬಂದು ದೂರು ಸುಳ್ಳು ಎಂದು ಬಹಿರಂಗಪಡಿಸಿದ್ದಾಳೆ. ತಂಗಿಯ ಸ್ಥಾನದಲ್ಲಿರುವ ಮಗುವಿನ ಯೋಗಕ್ಷೇಮಕ್ಕಾಗಿ ಮಧ್ಯಪ್ರವೇಶಿಸಿ ಜೈಲಿನಲ್ಲಿ ಕಾಲ ಕಳೆಯಬೇಕಾಗಿ ಬಂದ ಯುವಕನಿಗೆ ಕೌನ್ಸೆಲಿಂಗ್ ನೀಡುವಂತೆಯೂ ನ್ಯಾಯಾಲಯ ಸೂಚಿಸಿದೆ. ಪೋಕ್ಸೋ ಪ್ರಕರಣದ ದುರ್ಬಳಕೆಗೆ ಇದು ಉತ್ತಮ ಉದಾಹರಣೆ ಎಂದು ನ್ಯಾಯಾಲಯ ಹೇಳಿದೆ.