ವಯನಾಡ್: ವಯನಾಡ್ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಅವಶೇಷಗಳಡಿ ಸಿಲುಕಿರುವವರ ಪತ್ತೆಗೆ ಭಾರತೀಯ ಸೇನೆಯ ಲ್ಯಾಬ್ರಡಾರ್ ತಳಿಯ ನಾಯಿಗಳಾದ ಜಾಕಿ, ಡಿಕ್ಸಿ ಹಾಗೂ ಸಾರಾ ದಣಿವರಿಯದೆ ಕೆಲಸ ಮಾಡುತ್ತಿವೆ.
ಕೆಸರು, ಮಣ್ಣು, ಮಳೆಯ ನಡುವೆಯೇ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವರೊಂದಿಗೆ ಭಾಗಿಯಾಗಿವೆ.
ಅವಶೇಷಗಳಲ್ಲಿ ಸಿಲುಕಿರುವರನ್ನ ಹುಡುಕಲು ಈ ನಾಯಿಗಳು ತಮ್ಮ ಸೂಕ್ಷ್ಮವಾದ ಆಘ್ರಾಣಿಸುವ ಸಾಮರ್ಥ್ಯವನ್ನು ಬಳಸುತ್ತಿವೆ. ಈ ಬಗ್ಗೆ ಸೇನೆ ಅವುಗಳಿಗೆ ವಿಶೇಷ ತರಬೇತಿಯನ್ನೂ ನೀಡಿದೆ.
'ಮನುಷ್ಯರ ಸ್ನೇಹಿತರು, ಮನುಷ್ಯರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು, ವಯನಾಡ್‌ನಲ್ಲಿ ಅವಶೇಷಗಳಡಿ ಸಿಲುಕಿರುವ ಮನುಷ್ಯರ ಪತ್ತೆಯಲ್ಲಿ ತೊಡಗಿವೆ. ಭಾರತೀಯ ಸೇನೆಯಲ್ಲಿರುವ ಲ್ಯಾಬ್ರಡಾರ್ ತಳಿಯ ಜಾಕಿ, ಡಿಕ್ಸಿ ಹಾಗೂ ಸಾರಾ ನಾಯಿಗಳು ಮಣ್ಣಿನಡಿಯಲ್ಲಿರುವ ಜೀವಗಳ ಪತ್ತೆಗೆ ಮಣ್ಣು, ಕೆಸರು, ಮಳೆಯ ನಡುವೆಯೂ ಕೆಲಸ ಮಾಡುತ್ತಿವೆ' ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮೀರಠ್ ದಂಡುವಿನಲ್ಲಿರುವ ಆರ್.ವಿ.ಸಿ ಕೇಂದ್ರ ಹಾಗೂ ಕಾಲೇಜಿನಲ್ಲಿ ಈ ನಾಯಿಗಳು ತರಬೇತಿ ಪಡೆದಿವೆ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಸೇರಿ 9 ವಿವಿಧ ತರಬೇತಿಗಳನ್ನು ಈ ನಾಯಿಗಳಿಗೆ ನೀಡಲಾಗಿದೆ.
ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ತರಬೇತಿ ಪಡೆದಿರುವ ಈ ಶ್ವಾನಗಳು, ಅವಶೇಷಗಳಡಿ ಸಿಲುಕಿರುವ ಮಾನವರ ದೇಹದ ವಾಸನೆಯನ್ನು ಪತ್ತೆಹಚ್ಚುವಲ್ಲಿ ವಿಶೇಷ ಪರಿಣತಿ ಹೊಂದಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಇಂಥ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆಗಗಳಲ್ಲಿ ಪಾಲ್ಗೊಳ್ಳಲು ಈ ಶ್ವಾನಗಳು 12 ವಾರಗಳ ಮೂಲ ತರಬೇತಿ ಹಾಗೂ 24 ವಾರಗಳ ವಿಶೇಷ ತರಬೇತಿ ಪಡೆದುಕೊಂಡಿವೆ. 10-12 ಅಡಿ ಆಳದಲ್ಲಿರುವ ಮಾನವ ದೇಹದ ವಾಸನೆಯನ್ನು ಈ ಶ್ವಾನಗಳು ಗ್ರಹಿಸಬಲ್ಲದು.
ಮಾನವ ದೇಹದ ವಾಸನೆಯನ್ನು ಗ್ರಹಿಸಿದ ಕೂಡಲೇ ಸೂಚನೆ ನೀಡುತ್ತವೆ. ಈ ಹಿಂದೆ ಈ ಶ್ವಾನಗಳ ಬಳಸಿ ನಡೆಸಿದ ಕಾರ್ಯಾಚರಣೆಗಳು ಉತ್ತಮ ಫಲಿತಾಂಶ ನೀಡಿವೆ.